ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಸ್ಫೋಟ ಬೆದರಿಕೆ: ಆರೋಪಿ ಬಂಧನ

ಅಹ್ಮದಾಬಾದ್ : ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಮ್ ಮೇಲೆ ದಾಳಿ ನಡೆಸುವ ಬೆದರಿಕೆಯನ್ನು ಹೊಂದಿದ ಇಮೇಲ್ ಕಳುಹಿಸಿದ ಆರೋಪದಲ್ಲಿ ಅಹ್ಮದಾಬಾದ್ ಕ್ರೈಮ್ ಬ್ರಾಂಚ್ ಒರ್ವ ವ್ಯಕ್ತಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.
ಆರೋಪಿಯನ್ನು ಗುಜರಾತ್ ನ ರಾಜ್ ಕೋಟ್ ನಿಂದ ಬಂಧಿಸಲಾಗಿದೆ. ಆರೋಪಿಯು ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ಪಂದ್ಯಗಳು ನಡೆಯುವ ಮೈದಾನಗಳಲ್ಲಿ ನರೇಂದ್ರ ಮೋದಿ ಸ್ಟೇಡಿಯಮ್ ಕೂಡ ಒಂದಾಗಿದೆ. ಅಲ್ಲಿ ಅಕ್ಟೋಬರ್ 14ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ.
ಸ್ಟೇಡಿಯಂನಲ್ಲಿ ಸ್ಫೋಟ ನಡೆಯಲಿದೆ ಎಂಬ ಬೆದರಿಕೆಯನ್ನು ಹೊತ್ತ ಈ-ಮೇಲ್ ಒಂದನ್ನು ಆರೋಪಿ ಕಳುಹಿಸದ್ದಾನೆನ್ನಲಾಗಿದೆ. ಅದರ ವಿವರಗಳನ್ನು ಪೊಲೀಸರು ನೀಡಿಲ್ಲ. ಮಧ್ಯಪ್ರದೇಶದಿಂದ ಬಂದಿರುವ ಆರೋಪಿಯು ರಾಜ್ ಕೋಟ್ ನ ಹೊರವಲಯದಲ್ಲಿ ವಾಸಿಸುತ್ತಿದ್ದನು.
‘‘ಅವನು ತನ್ನ ಫೋನ್ ನಿಂದ ತನ್ನದೇ ಹೆಸರಿನಲ್ಲಿ ಸಣ್ಣ ಈ - ಮೇಲ್ ಕಳುಹಿಸಿದ್ದಾನೆ. ಆತ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿಲ್ಲ’’ ಎಂದು ಪೊಲಿಸರು ಹೇಳಿದ್ದಾರೆ.





