ಮುಂಬೈ ಏರ್ಪೋರ್ಟ್, ತಾಜ್ ಹೋಟೆಲ್ಗೆ ಬಾಂಬ್ ಬೆದರಿಕೆ

ಮುಂಬೈ ಏರ್ಪೋರ್ಟ್, ತಾಜ್ ಹೋಟೆಲ್ | PC : PTI
ಮುಂಬೈ: ಇಲ್ಲಿಯ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪ್ರತಿಷ್ಠಿತ ತಾಜ್ಮಹಲ್ ಪ್ಯಾಲೇಸ್ ಹೋಟೆಲ್ ಸ್ಫೋಟಿಸುವುದಾಗಿ ಇಮೇಲ್ ಬೆದರಿಕೆಯನ್ನು ಮುಂಬೈ ಪೋಲಿಸರು ಸ್ವೀಕರಿಸಿದ್ದು,ಸಂಸತ್ ದಾಳಿಯ ಪ್ರಮುಖ ಆರೋಪಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸಿದ್ದು ಅನ್ಯಾಯ ಎಂದು ಅದರಲ್ಲಿ ಹೇಳಲಾಗಿದೆ.
ತಕ್ಷಣ ಎರಡೂ ಸ್ಥಳಗಳಿಗೆ ಧಾವಿಸಿದ ಪೋಲಿಸರು ಸಮಗ್ರ ಪರಿಶೀಲನೆ ನಡೆಸಿದ್ದು, ಯಾವುದೇ ಶಂಕಾಸ್ಪದ ವಸ್ತು ಪತ್ತೆಯಾಗಿಲ್ಲ.
ಗುರುವಾರ ಬೆಳಿಗ್ಗೆ ಮುಂಬೈ ವಿಮಾನ ನಿಲ್ದಾಣ ಪೋಲಿಸ್ ಠಾಣೆಯ ಅಧಿಕೃತ ಇಮೇಲ್ ಐಡಿಗೆ ಬೆದರಿಕೆ ಬಂದಿತ್ತು.
ಇತ್ತೀಚಿನ ದಿನಗಳಲ್ಲಿ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಉಲ್ಬಣಗೊಂಡ ಬಳಿಕ ಈಗಾಗಲೇ ಮುಂಬೈ ಮಹಾನಗರವು ಕಟ್ಟೆಚ್ಚರದಲ್ಲಿದೆ. ನಗರದ ಹಲವು ಭಾಗಗಳಲ್ಲಿ ಭದ್ರತಾ ಸಂಸ್ಥೆಗಳು ಅಣುಕು ಕಾರ್ಯಾಚರಣೆಗಳನ್ನು ನಡೆಸಿವೆ.
ಕಳೆದ ವಾರ ಮಹಾರಾಷ್ಟ್ರ ಸಚಿವಾಲಯದ ವಿಪತ್ತು ನಿಯಂತ್ರಣ ಕೊಠಡಿ ಮತ್ತು ಪೋಲಿಸರಿಗೂ ಬಾಂಬ್ ಸ್ಫೋಟದ ಇಮೇಲ್ ಬೆದರಿಕೆ ಬಂದಿತ್ತು.





