ನೊಯ್ಡಾ, ಅಹ್ಮದಾಬಾದ್ನಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ: ಪೊಲೀಸರಿಂದ ಪರಿಶೀಲನೆ

Photo| indiatoday
ಹೊಸದಿಲ್ಲಿ: ಗಣರಾಜ್ಯೋತ್ಸವಕ್ಕೆ ಇನ್ನು ಮೂರು ದಿನಗಳು ಮಾತ್ರ ಬಾಕಿ ಇರುವಾಗ, ನೊಯ್ಡಾದಲ್ಲಿನ ಶಿವ ನಾಡಾರ್ ಶಾಲೆ ಮತ್ತು ಫಾದರ್ ಏಂಜೆಲ್ ಶಾಲೆ ಹಾಗೂ ಅಹ್ಮದಾಬಾದ್ನ ಹಲವು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಗಳು ರವಾನೆಯಾಗಿವೆ. ಸುದ್ದಿ ತಿಳಿಯುತ್ತಿದ್ದಂತೆ ಕ್ಷಿಪ್ರ ಕ್ರಮ ಕೈಗೊಂಡಿರುವ ಪೊಲೀಸರು, ಮುನ್ನೆಚ್ಚರಿಕೆಯ ಕ್ರಮವಾಗಿ ವಿದ್ಯಾರ್ಥಿಗಳನ್ನು ತರಗತಿಗಳಿಂದ ತೆರವುಗೊಳಿಸಿದ್ದಾರೆ.
ಬಾಂಬ್ ಬೆದರಿಕೆ ಹಿನ್ನೆಲೆ ನೊಯ್ಡಾದಲ್ಲಿನ ಎರಡು ಶಾಲೆಗಳ ಆವರಣದಲ್ಲಿ ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಮೂಲಕ ಪರಿಶೀಲನೆ ನಡೆಯುತ್ತಿದೆ.
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ನೊಯ್ಡಾ ಪೊಲೀಸರು, ಸ್ಥಳವನ್ನು ಪರಿಶೀಲನೆ ನಡೆಸಲಾಗುತ್ತಿದೆ. ಇಮೇಲ್ ಗಳ ಕುರಿತು ಸೈಬರ್ ಅಪರಾಧ ತಂಡವೊಂದು ತಾಂತ್ರಿಕ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಅಹ್ಮದಾಬಾದ್ ನಲ್ಲೂ ಕೂಡಾ ಹಲವಾರು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ರವಾನೆಯಾಗಿದ್ದು, ಈ ಕುರಿತು ಶಾಲಾ ಆಡಳಿತ ಮಂಡಳಿಗಳು ಪೊಲೀಸರಿಗೆ ಮಾಹಿತಿ ನೀಡಿವೆ. ಸ್ಥಳದಲ್ಲಿ ತನಿಖೆ ನಡೆಸಲು ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಅಗ್ನಿಶಾಮಕ ದಳಗಳು ಆಗಮಿಸಿವೆ.





