ದಿಲ್ಲಿಯ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ: ಪೊಲೀಸರಿಂದ ಶೋಧ

Photo| Hindustan Times
ಹೊಸದಿಲ್ಲಿ: ಬುಧವಾರ ದಿಲ್ಲಿಯ ಹಲವು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿರುವ ಬಗ್ಗೆ ವರದಿಯಾಗಿದೆ.
ANI ವರದಿಯ ಪ್ರಕಾರ, ಶಾಲೆಗಳು ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವಂತೆ ಪೋಷಕರಿಗೆ ಸೂಚಿಸಿದೆ. ಈ ಬೆಳವಣಿಗೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಉಂಟು ಮಾಡಿದೆ.
ಪೂರ್ವ ದಿಲ್ಲಿಯ ಲಕ್ಷ್ಮಿ ನಗರದ ಖಾಸಗಿ ಶಾಲೆಗೆ ಬುಧವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಕ್ಷಿಪ್ರ ಕಾರ್ಯಾಚರಣೆ ಮೂಲಕ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಯಿತು ಎಂದು ದಿಲ್ಲಿ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಿ ಇಂಡಿಯನ್ ಸ್ಕೂಲ್ ಹೊರಡಿಸಿದ ನೋಟಿಸ್ನಲ್ಲಿ, "ಪ್ರಿಯ ಪೋಷಕರೇ, ಶಾಲೆಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಿಮ್ಮ ಮಗುವನ್ನು ವಾಪಾಸ್ಸು ಕರೆದುಕೊಂಡು ಹೋಗಲು ವಿನಂತಿಸಲಾಗಿದೆ" ಎಂದು ಬರೆಯಲಾಗಿದೆ.
ಬೆಳಿಗ್ಗೆ 10.40ರ ಸುಮಾರಿಗೆ ಲವ್ಲಿ ಪಬ್ಲಿಕ್ ಶಾಲೆಯೊಳಗೆ ಸ್ಫೋಟಕ ಸಾಧನವನ್ನು ಇರಿಸಲಾಗಿದೆ ಎಂದು ಹೇಳಿಕೊಂಡು ಬೆದರಿಕೆ ಸಂದೇಶ ಬಂದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಅನುಮಾನಾಸ್ಪದವಾಗಿರುವ ವಸ್ತುಗಳು ಏನೂ ಕಂಡುಬಂದಿಲ್ಲ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.







