ತಾಯಿಯ ಮನವಿ ಮೇರೆಗೆ ಮೃತ ವ್ಯಕ್ತಿಯ ವೀರ್ಯ ಸಂರಕ್ಷಣೆಗೆ ಮುಂಬೈ ಹೈಕೋರ್ಟ್ ಆದೇಶ

PC: x.com/fpjindia
ಮುಂಬೈ: ಮೃತಪಟ್ಟ ವ್ಯಕ್ತಿಯೊಬ್ಬರ ಹೆಪ್ಪುಗಟ್ಟಿದ ವೀರ್ಯ ಸಂರಕ್ಷಿಸಿ ಇಡುವಂತೆ ಮುಂಬೈ ಹೈಕೋರ್ಟ್ ಸಂತಾನಶಕ್ತಿ ಚಿಕಿತ್ಸಾ ಕೇಂದ್ರವೊಂದಕ್ಕೆ ಆದೇಶ ನೀಡಿದೆ.
ತಮ್ಮ ವಂಶವನ್ನು ಮುಂದುವರಿಸುವ ಉದ್ದೇಶದಿಂದ ಮೃತ ಮಗನ ವೀರ್ಯವನ್ನು ಹಸ್ತಾಂತರಿಸಲು ಆದೇಶಿಸುವಂತೆ ಕೋರಿ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಬಾಕಿ ಇರಿಸಿದ ಹೈಕೋರ್ಟ್ ಸದ್ಯಕ್ಕೆ ವೀರ್ಯ ಸಂಗ್ರಹಿಸಿ ಇಡುವಂತೆ ಸಂತಾನಶಕ್ತಿ ಚಿಕಿತ್ಸಾ ಕೇಂದ್ರಕ್ಕೆ ಆದೇಶಿಸಿದೆ. ಮೃತ ವ್ಯಕ್ತಿಯ ವೀರ್ಯವನ್ನು ತಾಯಿಗೆ ನೀಡಲು ಸಂತಾನಶಕ್ತಿ ಚಿಕಿತ್ಸಾ ಕೇಂದ್ರ ನಿರಾಕರಿಸಿತ್ತು.
ಕಿಮೋಥೆರಪಿ ವೇಳೆ ವೀರ್ಯ ಸಂರಕ್ಷಿಸಿ ಇಡಲು ವ್ಯಕ್ತಿ ಕೋರಿದ್ದರು. ನ್ಯಾಯಮೂರ್ತಿ ಮನೀಶ್ ಪಿಟಾಲೆ ಈ ಬಗ್ಗೆ ತೀರ್ಪು ನೀಡಿ, ಈ ಅರ್ಜಿಯನ್ನು ಇತ್ಯರ್ಥಪಡಿಸುವ ಮುನ್ನ ವೀರ್ಯ ನಾಶಪಡಿಸಿದರೆ, ಅರ್ಜಿಯ ಉದ್ದೇಶ ಈಡೇರಿದಂತಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅರ್ಜಿ ಸಲ್ಲಿಸಿದ ಮಹಿಳೆಯ ಮಗ ಕುಟುಂಬದ ಸಲಹೆ ಪಡೆಯದೇ ಒಂದು ವೇಳೆ ಚಿಕಿತ್ಸೆಯ ಸಂದರ್ಭ ಮೃತಪಟ್ಟಲ್ಲಿ ವೀರ್ಯ ನಾಶಪಡಿಸುವಂತೆ ಅರ್ಜಿಯಲ್ಲಿ ನಮೂದಿಸಿದ್ದರು. ಫೆಬ್ರುವರಿ 16ರಂದು ಈತ ಮೃತಪಟ್ಟಿದ್ದ.
ಫೆಬ್ರವರಿ 24 ಮತ್ತು 26ರಂದು ನೋವಾ ಐವಿಎಫ್ ಫರ್ಟಿಲಿಟಿ ಸೆಂಟರ್ ಗೆ ಇ-ಮೇಲ್ ಕಳುಹಿಸಿದ ಮಹಿಳೆ, ಮೃತ ಮಗನ ವೀರ್ಯದ ಮಾದರಿಯನ್ನು ನಾಶಪಡಿಸದಂತೆ ಕೋರಿದ್ದರು ಹಾಗೂ ಈ ಮಾದರಿಯನ್ನು ಗುಜರಾತ್ ಮೂಲದ ಐವಿಎಫ್ ಕೇಂದ್ರಕ್ಕೆ ಭವಿಷ್ಯದ ಬಳಕೆಗಾಗಿ ವರ್ಗಾಯಿಸುವಂತೆ ಮನವಿ ಮಾಡಿದ್ದರು. ಫೆಬ್ರುವರಿ 27ರಂದು ನೋವಾ ಇದನ್ನು ನಿರಾಕರಿಸಿ, ಅಸಿಸ್ಟೆಡ್ ರಿಪ್ರೊಡಕ್ಷನ್ ಟೆಕ್ನಾಲಜಿ (ನಿಯಂತ್ರಣ) ಕಾಯ್ದೆ ಮತ್ತು ನಿಯಮಾವಳಿ ಅನ್ವಯ ಕೋರ್ಟ್ ನಿಂದ ಅನುಮತಿ ಪಡೆಯುವಂತೆ ಸೂಚಿಸಿತ್ತು.







