ಮೊಮ್ಮಗುವನ್ನು ವಶದಲ್ಲಿರಿಸಲು ಅಜ್ಜಿಗೆ ಕಾನೂನುಬದ್ಧ ಹಕ್ಕಿಲ್ಲ: ಬಾಂಬೆ ಹೈಕೋರ್ಟ್

ಬಾಂಬೆ ಹೈಕೋರ್ಟ್
ಮುಂಬೈ,ಸೆ.5: ಐದು ವರ್ಷದ ಮೊಮ್ಮಗನನ್ನು ಆತನ ಹೆತ್ತವರಿಗೆ ಹಿಂತಿರುಗಿಸುವಂತೆ ಬಾಂಬೆ ಹೈಕೋರ್ಟ್ ಮಹಿಳೆಯೊಬ್ಬರಿಗೆ ಗುರುವಾರ ಆದೇಶಿಸಿದೆ.
ಮಗುವಿನೊಂದಿಗೆ ಮಹಿಳೆಗೆೆ ಇರುವ ಭಾವಾನಾತ್ಮಕ ಬಂಧವು ಆತನನ್ನು ತನ್ನ ಬಳಿ ಇರಿಸಿಕೊಳ್ಳುವುದಕ್ಕೆ ಆಕೆಗೆ ಹೆತ್ತವರಿಗಿಂತ ಹೆಚ್ಚಿನ ಹಕ್ಕನ್ನು ನೀಡುವುದಿಲ್ಲವೆಂದು ಅದು ಸ್ಪಷ್ಟಪಡಿಸಿದೆ.
ಈ ಬಾಲಕನ ಅವಳಿ ಸೋದರ ‘ಸಿರೆಬ್ರಲ್ ಪಾಲ್ಸಿ’ ಎಂಬ ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದುದರಿಂದ, ಹೆತ್ತವರು ಆತನ ಪಾಲನೆಗೆ ಹೆಚ್ಚು ಗಮನಕೊಡಬೇಕಾಗಿತ್ತು. ಹೀಗಾಗಿ ಈ ಬಾಲಕನು ಅಜ್ಜಿಯ (ತಂದೆಯ ತಾಯಿ) ಪಾಲನೆಯಲ್ಲಿದ್ದನು. ಆದರೆ ಆಸ್ತಿಯ ವಿವಾದವುಂಟಾದ ಹಿನ್ನೆಲೆಯಲ್ಲಿ ಬಾಲಕನ ತಂದೆಯು, ಮಗುವನ್ನು ತನಗೆ ಹಸ್ತಾಂತರಿಸುವಂತೆ 74 ವರ್ಷ ವಯಸ್ಸಿನ ಅವರ ತಾಯಿಗೆ ತಿಳಿಸಿದ್ದರು. ಆದಕ್ಕೆ ಆಕೆ ನಿರಾಕರಿಸಿದಾಗ ಆತ ಹೈಕೋರ್ಟ್ ಮೆಟ್ಟಲೇರಿದ್ದರು.
ಮಗುವಿನ ಅಜ್ಜಿಯು, ಈ ಅರ್ಜಿಯನ್ನು ವಿರೋಧಿಸಿದ್ದರು. ಮಗುವು ಹುಟ್ಟಿದಾಗಿನಿಂದ ತಾನು ಆತನ ಪಾಲನೆಯನ್ನು ನೋಡಿಕೊಳ್ಳುತ್ತಿದ್ದೇನೆ ಹಾಗೂ ತಾವಿಬ್ಬರೂ ಭಾವನಾತ್ಮಕ ನಂಟನ್ನು ಹೊಂದಿರುವುದಾಗಿ ತಿಳಿಸಿದ್ದರು.
ಪ್ರಕರಣದ ಆಲಿಕೆ ನಡೆಸಿದ ನ್ಯಾಯಮೂರ್ತಿಗಳಾದ ರವೀಂದ್ರ ಘುಗೆ ಹಾಗೂ ಗೌತಮ್ ಆಂಕಡ್ ಅವರನ್ನೊಳಗೊಂಡ ನ್ಯಾಯಪೀಠವು ಈ ಬಗ್ಗೆ ತೀರ್ಪು ನೀಡಿದ್ದು, ಮಗುವನ್ನು ಅದರ ಪಾಲಕರಿಗೆ ಹಸ್ತಾಂತರಿಸುವಂತೆ ಸೂಚಿಸಿತು. ಮಗುವಿನ ಜೊತೆ ಅಜ್ಜಿಯು ಭಾವನಾತ್ಮಕ ಸಂಬಂಧವನ್ನು ಹೊಂದಿರಬಹುದು. ಆದರೆ ಅದು ,ಆತನ ಮೇಲೆ ಜೈವಿಕ ಪಾಲಕರಿಗೆ ಇರುವುದಕ್ಕಿಂತ ಹೆಚ್ಚಿನ ಹಕ್ಕನ್ನು ಆಕೆಗೆ ನೀಡಲಾರದು ಎಂದು ಪ್ರತಿಪಾದಿಸಿತು.
ಆದರೆ ಮಗುವಿನ ಹಸ್ತಾಂತರವು ಆದರ ಶ್ರೇಯಸ್ಸಿಗೆ ಹಿನ್ನಡೆಯಾದಲ್ಲಿ ಮಾತ್ರವೇ ಆತನ ಮೇಲೆ ಹೆತ್ತವರಿಗಿರುವ ಹಕ್ಕನ್ನು ಕಡಿತಗೊಳಿಸಬಹುದಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಅವಳಿ ಮಕ್ಕಳನ್ನು ಪಾಲಿಸಲು ಅರ್ಜಿದಾರ ಪುತ್ರ ಹಾಗೂ ಆತನ ಹೆಂಡತಿ ಅಸಮರ್ಥರಾಗಿದ್ದಾರೆಂಬ ಮಗುವಿನ ಅಜ್ಜಿಯ ವಾದವನ್ನು ಪುರಸ್ಕರಿಸಲು ನ್ಯಾಯಾಲಯ ನಿರಾಕರಿಸಿತು. ಮುಂದಿನ ಎರಡು ವಾರಗಳೊಳಗೆ ಮಗುವನ್ನು ಆತನ ಪಾಲಕರ ವಶಕ್ಕೊಪ್ಪಿಸುವಂತೆ ನ್ಯಾಯಾಲಯವು ಮಹಿಳೆಗೆ ಆದೇಶಿಸಿತು.







