ದೇಶವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಟಿಐಎಸ್ಎಸ್ನಿಂದ ತನ್ನ ಅಮಾನತು ಪ್ರಶ್ನಿಸಿದ್ದ ದಲಿತ ಪಿಎಚ್ಡಿ ವಿದ್ಯಾರ್ಥಿಯ ಅರ್ಜಿ ಬಾಂಬೆ ಹೈಕೋರ್ಟ್ನಲ್ಲಿ ವಜಾ

ಬಾಂಬೆ ಹೈಕೋರ್ಟ್ | PC : PTI
ಮುಂಬೈ: ಟಾಟಾ ಸಮಾಜ ವಿಜ್ಞಾನ ಸಂಸ್ಥೆ(ಟಿಐಎಸ್ಎಸ್)ಯು ಪುನರಾವರ್ತಿತ ದುರ್ನಡತೆ ಮತ್ತು ದೇಶವಿರೋಧಿ ಚಟುವಟಿಕೆಗಳ ಆರೋಪದಲ್ಲಿ ತನ್ನನ್ನು ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿ ದಲಿತ ಪಿಎಚ್ಡಿ ವಿದ್ಯಾರ್ಥಿ ರಾಮದಾಸ ಕೆ.ಎಸ್.ಅವರು ಕಳೆದ ವರ್ಷ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯವು ಬುಧವಾರ ವಜಾಗೊಳಿಸಿದೆ.
ಟಿಐಎಸ್ಎಸ್ನ ಸ್ಕೂಲ್ ಆಫ್ ಡೆವಲಪ್ಮೆಂಟ್ ಸ್ಟಡೀಸ್ನಿಂದ ಎರಡು ವರ್ಷಗಳ ಅವಧಿಗೆ ತನ್ನನ್ನು ಅಮಾನುತುಗೊಳಿಸಿ 2024,ಎ.18ರಂದು ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ರಾಮದಾಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅತುಲ್ ಎಸ್.ಚಂದೂರ್ಕರ್ ಮತ್ತು ಎಂ.ಎಂ.ಸತ್ಯೆ ಅವರ ಪೀಠವು ಈ ತೀರ್ಪನ್ನು ಹೊರಡಿಸಿದೆ. ‘ಇದು ಮಧ್ಯಪ್ರವೇಶಕ್ಕೆ ಅರ್ಹವಾದ ಪ್ರಕರಣವಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಮತ್ತು ಅದನ್ನು ವಜಾಗೊಳಿಸಲಾಗಿದೆ’ ಎಂದು ಪೀಠವು ಹೇಳಿದೆ.
ತನ್ನ ಅಮಾನತಿಗೆ ಶಿಫಾರಸು ಮಾಡಿದ್ದ ಟಿಐಎಸ್ಎಸ್ನ ಸಬಲೀಕರಣ ಸಮಿತಿಯ ವರದಿಯನ್ನು ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಿದ್ದ ರಾಮದಾಸ,ಸಮಿತಿಯು ತನಗೆ ವೈಯಕ್ತಿಕವಾಗಿ ಅಹವಾಲು ಮಂಡನೆಗೆ ಅವಕಾಶ ನೀಡದೇ ನಿರಂಕುಶ ವಿಚಾರಣೆಯನ್ನು ನಡೆಸಿತ್ತು ಮತ್ತು ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಿರಲಿಲ್ಲ ಎಂದು ವಾದಿಸಿದ್ದರು.
ರಾಮದಾಸ ಅರ್ಜಿಯು ಬಾಕಿಯಿರುವಂತೆ ಅವರಿಗೆ ಫೆಲೋಶಿಪ್ ಮುಂದುವರಿಯುವಂತಾಗಲು ಅವರ ದಾಖಲೆಗಳನ್ನು ಅಪ್ಲೋಡ್ ಮಾಡುವಂತೆ ಉಚ್ಚ ನ್ಯಾಯಾಲಯವು ಕಳೆದ ವರ್ಷದ ಜುಲೈನಲ್ಲಿ ಟಿಐಎಸ್ಎಸ್ಗೆ ನಿರ್ದೇಶನ ನೀಡಿತ್ತು.
ಸಂಸ್ಥೆಯ ಕುಲಪತಿಗಳಿಗೆ ಮೇಲ್ಮನವಿ ಸಲ್ಲಿಸುವ ಪರ್ಯಾಯ ಪರಿಹಾರ ಲಭ್ಯವಿದ್ದರೂ ರಾಮದಾಸ ಅದನ್ನು ಬಳಸದೆ ನೇರವಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸಿರುವುದರಿಂದ ಅದನ್ನು ವಜಾಗೊಳಿಸುವಂತೆ ಟಿಐಎಸ್ಎಸ್ ಕಳೆದ ವರ್ಷದ ಮೇ ತಿಂಗಳಲ್ಲಿ ಉಚ್ಚ ನ್ಯಾಯಾಲಯವನ್ನು ಕೋರಿಕೊಂಡಿತ್ತು. ಆದರೆ ರಾಮದಾಸ ಪರ ವಕೀಲರು ಸಂಸ್ಥೆಯ ಪ್ರತಿಪಾದನೆಯನ್ನು ನಿರಾಕರಿಸಿದ್ದರು.
ತಾನು ಅಮಾನತು ಆದೇಶವನ್ನು ಹೊರಡಿಸಿದ ಬಳಿಕ ರಾಮದಾಸರನ್ನು ಬೆಂಬಲಿಸಿ ಕೆಲವು ರಾಜಕೀಯ ಪಕ್ಷಗಳು ಮತ್ತು ಸಂಸ್ಥೆಗಳಿಂದ ತನಗೆ ಪತ್ರಗಳು ಬಂದಿದ್ದವು ಹಾಗೂ ಸಂಸ್ಥೆಯ ವಿರುದ್ಧ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ನಡೆಸಲಾಗಿತ್ತು,ಇದು ಅರ್ಜಿದಾರರು ಸಂಸ್ಥೆಯ ಮೇಲೆ ಒತ್ತಡ ಹೇರಲು ತನ್ನ ಪ್ರಭಾವ ಮತ್ತು ಪ್ರಬಲ ರಾಜಕೀಯ ಸಂಪರ್ಕಗಳನ್ನು ಬಳಸುತ್ತಿರುವುದನ್ನು ತೋರಿಸಿತ್ತು ಎಂದು ಟಿಐಎಸ್ಎಸ್ ವಾದಿಸಿತ್ತು.