Australia | ಬೊಂಡಿ ಬೀಚ್ ನಲ್ಲಿ ಶೂಟೌಟ್; ಬಂದೂಕುಧಾರಿಗಳು ಹೈದರಾಬಾದ್ ಮೂಲದವರು : ಪೊಲೀಸರು

Photo: AP/PTI
ಹೈದರಾಬಾದ್: ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಬೊಂಡಿ ಬೀಚ್ ಬಳಿ ನಡೆದ ಶೂಟೌಟ್ ನಡೆಸಿದ್ದ ಸಾಜಿದ್ ಅಕ್ರಂ (50) ಹಾಗೂ ಆತನ ಪುತ್ರ ನವೀದ್ ಅಕ್ರಂ (24) ಮೂಲತಃ ತೆಲಂಗಾಣದ ಹೈದರಾಬಾದ್ ನವರು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಜಿದ್ ಅಕ್ರಂ ಮೂಲತಃ ಹೈದರಾಬಾದ್ ನಗರದ ಮಹ್ದಿಪಟ್ಣಂ ಮೂಲದವನಾಗಿದ್ದು, 27 ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾ ಮೇಲೆ ಆಸ್ಟ್ರೇಲಿಯಾಗೆ ವಲಸೆ ಹೋಗಿದ್ದನು ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ. ಆತನ ಇಬ್ಬರು ಸಹೋದರರು ಹೈದರಾಬಾದ್ ನಗರದಲ್ಲೇ ವಾಸವಿದ್ದಾರೆ. ಆದರೆ, ನಮ್ಮೊಂದಿಗೆ ಆತ ತೀರಾ ಕಡಿಮೆ ಸಂಪರ್ಕ ಹೊಂದಿದ್ದಾನೆ ಎಂದು ಆತನ ಸಂಬಂಧಿಕರು ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ.
ಸಾಜಿದ್ ಅಕ್ರಂ ಮೂಲತಃ ಹೈದರಾಬಾದ್ ನಗರದ ನಿವಾಸಿ. ಹೈದರಾಬಾದ್ ನಲ್ಲಿ ಬಿಕಾಂ ಪದವಿ ಪೂರೈಸಿದ್ದ ಆತ, ಉದ್ಯೋಗವನ್ನರಸಿ ಸುಮಾರು 27 ವರ್ಷಗಳ ಹಿಂದೆ ಆಸ್ಟ್ರೇಲಿಯಾಗೆ ವಲಸೆ ಹೋಗಿದ್ದ. ಆಸ್ಟ್ರೇಲಿಯಾದಲ್ಲಿ ಶಾಶ್ವತವಾಗಿ ನೆಲೆಸುವುದಕ್ಕೂ ಮುನ್ನ, ವೆನೆರೊ ಗ್ರಾಸೊ ಎಂಬ ಯುರೋಪ್ ಮೂಲದ ಮಹಿಳೆಯನ್ನು ಆತ ವಿವಾಹವಾಗಿದ್ದ. ದಾಳಿಕೋರರ ಪೈಕಿ ಒಬ್ಬನಾಗಿದ್ದ ನವೀದ್ ಅಕ್ರಂ ಆತನ ಪುತ್ರನಾಗಿದ್ದು, ಆತನಿಗೆ ಓರ್ವ ಪುತ್ರಿಯೂ ಇದ್ದಾಳೆ ಎಂದು ತೆಲಂಗಾಣ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಾಜಿದ್ ಅಕ್ರಂ ಇಂದಿಗೂ ಭಾರತೀಯ ಪಾಸ್ಪೋರ್ಟ್ ಹೊಂದಿದ್ದರೆ, ಆಸ್ಟ್ರೇಲಿಯಾದಲ್ಲೇ ಜನಿಸಿದ್ದ ಆತನ ಪುತ್ರ ನವೀದ್ ಅಕ್ರಂ ಹಾಗೂ ಪುತ್ರಿ ಆಸ್ಟ್ರೇಲಿಯಾ ಪ್ರಜೆಗಳೇ ಆಗಿದ್ದಾರೆ.
ರವಿವಾರ ಸಿಡ್ನಿಯ ಬೊಂಡಿ ಬೀಚ್ನಲ್ಲಿ ಆಯೋಜನೆಗೊಂಡಿದ್ದ ಹನುಕ್ಕ ಸಾರ್ವಜನಿಕ ಸಂಭ್ರಮಾಚರಣೆಯ ವೇಳೆ ಇಬ್ಬರು ದಾಲಿಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಬಂದೂಕುಧಾರಿ ಸೇರಿದಂತೆ ಒಟ್ಟು 15 ಮಂದಿ ಹತರಾಗಿದ್ದರು. ಈ ದಾಳಿಯನ್ನು ಆಸ್ಟ್ರೇಲಿಯಾ ಸರಕಾರ ಮತ್ತು ಪೊಲೀಸರು ಭಯೋತ್ಪಾದಕ ದಾಳಿ ಎಂದು ಪರಿಗಣಿಸಿದ್ದಾರೆ. ದಾಳಿಕೋರರು ಐಸಿಸ್ ಸಿದ್ಧಾಂತದಿಂದ ಪ್ರೇರಿತರಾಗಿದ್ದರು ಎಂದು ವರದಿಯಾಗಿದೆ. ಈ ಸಂಬಂಧ ಆಸ್ಟ್ರೇಲಿಯಾ ಪೊಲೀಸರು ಮತ್ತಷ್ಟು ತನಿಖೆ ಕೈಗೊಂಡಿದ್ದಾರೆ.
ಸೌಜನ್ಯ: deccanherald.com







