ಯುದ್ಧದ ಮುಸುಕು ತಿಳಿ: ಸಹಜ ಸ್ಥಿತಿಗೆ ಮರಳಿದ ಗಡಿ ಪ್ರಾಂತ್ಯಗಳ ಜನಜೀವನ

PC : PTI
ಹೊಸದಿಲ್ಲಿ: ಸುಮಾರು ಒಂದು ವಾರ ಕಾಲ ತುದಿಗಾಲಲ್ಲಿ ನಿಲ್ಲಿಸಿದ್ದ ಯುದ್ಧ ಭೀತಿಯು ತಿಳಿಯಾದ ಬೆನ್ನಿಗೇ, ಉತ್ತರ ಭಾರತದ ಗಡಿ ಪ್ರಾಂತ್ಯಗಳು ಕಡಿಮೆ ಆತಂಕದ ದಿನವನ್ನು ಅನುಭವಿಸಿದ್ದು, ಇಂದು ಯಾವುದೇ ಶೆಲ್ ದಾಳಿ, ಡ್ರೋನ್ ಗಳ ಹಾರಾಟವಿಲ್ಲದೆ ಹಾಗೂ ಲಘು ತುರ್ತು ಕ್ರಮಗಳ ಹೇರಿಕೆಯಿಂದಾಗಿ ಈ ಪ್ರಾಂತ್ಯಗಳಲ್ಲಿನ ಜನಜೀವನ ಸಹಜ ಸ್ಥಿತಿಗೆ ಮರಳಿದೆ.
ನಾಲ್ಕು ದಿನಗಳ ಕಾಲ ಗಡಿಗುಂಟ ತೀವ್ರ ಸ್ವರೂಪದಲ್ಲಿ ನಡೆದ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನ ಶನಿವಾರದಂದು ತಮ್ಮ ಸೇನಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವ ಒಪ್ಪಂದಕ್ಕೆ ಬಂದಿದ್ದವು.
ಪಾಕಿಸ್ತಾನ ಭಾರಿ ಪ್ರಮಾಣದ ಶೆಲ್ ದಾಳಿ ನಡೆಸಿದ್ದರಿಂದಾಗಿ, ತಮ್ಮ ಗ್ರಾಮಗಳಿಂದ ಪರಾರಿಯಾಗಿದ್ದ ಗಡಿ ನಿಯಂತ್ರಣ ರೇಖೆಯ ಸಮೀಪ ವಾಸಿಸುತ್ತಿರುವ ಗ್ರಾಮಸ್ಥರು ಸೋಮವಾರದಂದು ತಮ್ಮ ನಿವಾಸಗಳಿಗೆ ಮರಳಲು ಪ್ರಾರಂಭಿಸಿದರು.
ಯಾವುದೇ ಉಳಿದು ಹೋಗಿರುವ ಅಥವಾ ಸ್ಫೋಟಗೊಳ್ಳದ ಶೆಲ್ ಗಳನ್ನು ಬಾಂಬ್ ನಿಷ್ಕ್ರಿಯ ದಳಗಳು ವಸತಿ ಪ್ರದೇಶಗಳಿಂದ ತೆರವುಗೊಳಿಸಿದ ನಂತರ, ಗ್ರಾಮಸ್ಥರು ತಮ್ಮ ನಿವಾಸಗಳಿಗೆ ಮರಳಲು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು PTI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಉರಿಯಲ್ಲಿನ ಕಮಲ್ ಕೋಟೆ ನಿವಾಸಿ ಅರ್ಶದ್ ಅಹ್ಮದ್, “ಉಭಯ ದೇಶಗಳ ನಡುವೆ ಕದನ ವಿರಾಮದ ಒಪ್ಪಂದವಾಗಿರುವುದಕ್ಕೆ ನಮಗೆ ಸಂತಸವಾಗಿದೆ. ಪಾಕಿಸ್ತಾನ ಮತ್ತೆ ಇಂತಹ ಕೃತ್ಯಗಳಿಗೆ ಮುಂದಾಗುವುದಿಲ್ಲ ಎಂಬ ಭರವಸೆ ನಮಗಿದೆ” ಎಂದು ಹೇಳಿದ್ದಾರೆ.
ಗಡಿ ನಿಯಂತ್ರಣ ರೇಖೆಯ ಸಮೀಪವಿರುವ ಮುಂಚೂಣಿ ಗ್ರಾಮಗಳ ನಿವಾಸಿಗಳು ಜಾಗರೂಕರಾಗಿರಬೇಕು ಹಾಗೂ ಯಾವುದೇ ಅನುಮಾನಾಸ್ಪದ ವಸ್ತುಗಳನ್ನು ಮುಟ್ಟಬಾರದು ಎಂದು ಉರಿ ಶಾಸಕ ಸಜ್ಜದ್ ಶಫಿ ತಮ್ಮ ಕ್ಷೇತ್ರದ ಜನರಿಗೆ ಕಿವಿಮಾತು ಹೇಳಿದ್ದಾರೆ.







