ಭಾರತ-ಬಾಂಗ್ಲಾದೇಶ ಗಡಿ ಬಳಿ 2.82 ಕೋಟಿ ರೂ. ಮೌಲ್ಯದ ಚಿನ್ನ ಸಹಿತ ಕಳ್ಳಸಾಗಣೆದಾರನ ಬಂಧನ

ಕೋಲ್ಕತಾ,ಅ.12: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಭಾರತ-ಬಾಂಗ್ಲಾದೇಶ ಗಡಿ ಸಮೀಪ ಓರ್ವ ಕಳ್ಳಸಾಗಣೆದಾರನನ್ನು ಬಂಧಿಸಿರುವ ಗಡಿ ಭದ್ರತಾ ಪಡೆಯು(ಬಿಎಸ್‌ಎಫ್), ಆತನ ಬಳಿಯಿದ್ದ 2.82 ಕೋ.ರೂ.ಮೌಲ್ಯದ 20 ಕೆ.ಜಿ.ತೂಕದ ಚಿನ್ನದ ಬಿಸ್ಕಿಟ್‌ಗಳನ್ನು ವಶಪಡಿಸಿಕೊಂಡಿದೆ.
ಗಡಿಗೆ ಸಮೀಪದ ಮುಸ್ಲಿಮ್ ಪಾರಾ ಗ್ರಾಮದ ನಿವಾಸಿಯೋರ್ವ ಬಾಂಗ್ಲಾದೇಶದಿಂದ ತಂದಿರುವ ಅಕ್ರಮ ಚಿನ್ನವನ್ನು ಹೊರಾಂಡಿಪುರ ಪ್ರದೇಶದ ಮೂಲಕ ಕಳ್ಳ ಸಾಗಣೆ ಮಾಡಲು ಹವಣಿಸುತ್ತಿದ್ದಾನೆ ಎಂಬ ವಿಶ್ವಾಸಾರ್ಹ ಮಾಹಿತಿಯ ಮೇರೆಗೆ ಹೊರಾಂಡಿಪುರ ಬಾರ್ಡರ್ ಔಟ್‌ಪೋಸ್ಟ್ ನಲ್ಲಿ ನಿಯೋಜಿತ ಬಿಎಸ್‌ಎಫ್ ಸಿಬ್ಬಂದಿಗಳನ್ನು ಜಾಗ್ರತಗೊಳಿಸಲಾಗಿತ್ತು.
ಶನಿವಾರ ಬೆಳಿಗ್ಗೆ ಆರು ಗಂಟೆಯ ಸುಮಾರಿಗೆ ದಟ್ಟ ಬಿದಿರಿನ ಅರಣ್ಯದ ಹಿಂದೆ ವ್ಯಕ್ತಿಯೋರ್ವನ ಚಲನವಲನವನ್ನು ಬಿಎಸ್‌ಎಫ್ ಸಿಬ್ಬಂದಿಗಳು ಗಮನಿಸಿದ್ದರು. ಆತನನ್ನು ತಕ್ಷಣ ಸುತ್ತುವರಿದು ಶೋಧಿಸಿದಾಗ ಚಿನ್ನದ ಬಿಸ್ಕಿಟ್ ಗಳು ಪತ್ತೆಯಾಗಿವೆ ಎಂದು ಬಿಎಸ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಬಂಧಿತ ವ್ಯಕ್ತಿಯನ್ನು ಮತ್ತು ವಶಪಡಿಸಿಕೊಳ್ಳಲಾದ ಚಿನ್ನವನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಬಿಎಸ್‌ಎಫ್ ತಿಳಿಸಿದೆ.





