ಬಿಎಸ್‌ಎಫ್ ನ ವಾಯು ವಿಭಾಗಕ್ಕೆ ಮೊದಲ ಮಹಿಳಾ ಫ್ಲೈಟ್ ಇಂಜಿನಿಯರ್ ನೇಮಕ

ಹೊಸದಿಲ್ಲಿ,ಅ.12: ಗಡಿ ಭದ್ರತಾ ಪಡೆಯ(ಬಿಎಸ್‌ಎಫ್) ವಾಯು ವಿಭಾಗದ 50 ವರ್ಷಗಳಿಗೂ ಹೆಚ್ಚಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಫ್ಲೈಟ್ ಇಂಜಿನಿಯರ್ ನೇಮಕಗೊಂಡಿದ್ದಾರೆ.
ಬಿಎಸ್‌ಎಫ್ ಮಹಾ ನಿರ್ದೇಶಕ ದಲ್ಜಿತ್ ಸಿಂಗ್ ಚೌಧರಿಯವರು ಇತ್ತೀಚಿಗೆ ಇನ್ಸ್‌ಪೆಕ್ಟರ್ ಭಾವನಾ ಚೌಧರಿ ಮತ್ತು ನಾಲ್ವರು ಪುರುಷ ಅಧೀನ ಅಧಿಕಾರಿಗಳಿಗೆ ಫ್ಲೈಯಿಂಗ್ ಬ್ಯಾಡ್ಜ್ ಗಳನ್ನು ಪ್ರದಾನಿಸಿದರು.
1969ರಿಂದ ಗೃಹ ಸಚಿವಾಲಯದ ವಾಯಯಾನ ಘಟಕವನ್ನು ನಿರ್ವಹಿಸುವ ಹೊಣೆಯನ್ನು ಬಿಎಸ್‌ಎಫ್ ಗೆ ವಹಿಸಲಾಗಿದ್ದು, ಇದು ಎಲ್ಲ ಅರೆ ಮಿಲಿಟರಿ ಪಡೆಗಳು ಹಾಗೂ ಎನ್‌ಎಸ್‌ಜಿ ಮತ್ತು ಎನ್‌ಡಿಆರ್‌ಎಫ್‌ನಂತಹ ವಿಶೇಷ ಪಡೆಗಳ ಕಾರ್ಯಾಚರಣೆ ಅಗತ್ಯಗಳನ್ನು ಪೂರೈಸುತ್ತದೆ.
ಎಲ್ಲ ಐವರು ಅಧೀನ ಅಧಿಕಾರಿಗಳು ಬಿಎಸ್‌ಎಫ್‌ನ ವಾಯು ವಿಭಾಗದ ಬೋಧಕರಿಂದ ಆರಂಭಿಕ ತರಬೇತಿಯನ್ನು ಪಡೆದಿದ್ದರು ಮತ್ತು ಇತ್ತೀಚಿಗೆ ತಮ್ಮ ಎರಡು ತಿಂಗಳ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದರು.
ಬಿಎಸ್‌ಎಫ್‌ನ ವಾಯು ವಿಭಾಗವು ತನ್ನ ಹೆಲಿಕಾಪ್ಟರ್ ಗಳಿಗಾಗಿ ಫ್ಲೈಟ್ ಇಂಜಿನಿಯರ್‌ಗಳ ತೀವ್ರ ಕೊತೆಯನ್ನು ಎದುರಿಸುತ್ತಿದೆ. ಭಾರತೀಯ ವಾಯು ಪಡೆಯು ಮೂವರು ಅಧೀನ ಅಧಿಕಾರಿಗಳ ಮೊದಲ ತಂಡಕ್ಕೆ ತರಬೇತಿ ನೀಡಿತ್ತು. ಆದರೆ ವಿವಿಧ ನಿರ್ಬಂಧಗಳಿಂದಾಗಿ ಐವರು ಸಿಬ್ಬಂದಿಗಳ ಎರಡನೇ ತಂಡಕ್ಕೆ ಅಲ್ಲಿ ತರಬೇತಿಗೆ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಬಿಎಸ್‌ಎಫ್ ಗೃಹ ಸಚಿವಾಲಯದ ಅನುಮತಿಯನ್ನು ಪಡೆದುಕೊಂಡು ತನ್ನ ವಾಯು ವಿಭಾಗದಲ್ಲಿ ಐವರು ಅಧೀನ ಅಧಿಕಾರಿಗಳಿಗೆ ಆಂತರಿಕವಾಗಿ ತರಬೇತಿಯನ್ನು ಒದಗಿಸಿತ್ತು ಎಂದು ಅಧಿಕಾರಿಗಳು ತಿಳಿಸಿದರು.
ಭಾವನಾ ಚೌಧರಿ ಬಿಎಸ್‌ಎಫ್ ವಾಯ ವಿಭಾಗದ ಮೊದಲ ಮಹಿಳಾ ಫ್ಲೈಟ್ ಇಂಜಿನಿಯರ್ ಆಗಿದ್ದಾರೆ ಎಂದರು.
ಬಿಎಸ್‌ಎಫ್‌ನ ವಾಯು ವಿಭಾಗವು Mi17IV,Mi17 V5,ALH DHRUV ಮತ್ತು ಚೀತಾದಂತಹ ಹೆಲಿಕಾಪ್ಟರ್ ಗಳ ಜೊತೆಗೆ ವಿಐಪಿ ಕರ್ತವ್ಯಗಳಿಗಾಗಿ ಫಿಕ್ಸ್ಡ್ ವಿಂಗ್ ಎಂಬ್ರೇಯರ್ ಜೆಟ್ ಅನ್ನೂ ನಿರ್ವಹಿಸುತ್ತದೆ.







