ಬಾಕ್ಸರ್ ಮೇರಿ ಕೋಮ್ ನಿವಾಸದಲ್ಲಿ ಕಳ್ಳತನ

Photo credit: indiatoday.in
ಫರೀದಾಬಾದ್: ಆರು ಬಾರಿಯ ವಿಶ್ವ ಚಾಂಪಿಯನ್ ಹಾಗೂ ಒಂದು ಬಾರಿ ಒಲಿಂಪಿಕ್ ಪದಕ ವಿಜೇತೆಯಾದ ಖ್ಯಾತ ಬಾಕ್ಸರ್ ಮೇರಿ ಕೋಮ್ ಅವರು ಮೇಘಾಲಯದ ಸೊಹ್ರಾದಲ್ಲಿ ಆಯೋಜನೆಗೊಂಡಿದ್ದ ಅಂತಾರಾಷ್ಟ್ರೀಯ ಅರೆ ಮ್ಯಾರಥಾನ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತೆರಳಿದ್ದಾಗ, ಫರೀದಾಬಾದ್ ನ ಸೆಕ್ಟರ್ 46ರಲ್ಲಿರುವ ಅವರ ನಿವಾಸಕ್ಕೆ ಕಳ್ಳರು ಕನ್ನ ಹಾಕಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಎರಡು ಅಂತಸ್ತಿನ ಮೇರಿ ಕೋಂ ಅವರ ಬಂಗಲೆಗೆ ಸೆಪ್ಟೆಂಬರ್ 24ರ ಮಧ್ಯರಾತ್ರಿ ನುಗ್ಗಿರುವ ದುಷ್ಕರ್ಮಿಗಳು, ಬಂಗಲೆಗೆ ಹೊಂದಿಕೊಂಡಂತಿರುವ ಪಕ್ಕದಲ್ಲಿನ ಖಾಲಿ ನಿವೇಶನದ ಮೂಲಕ ಟೆರೇಸ್ ಮೇಲಿನ ಗಾಜಿನ ಕಿಟಕಿಯನ್ನು ಒಡೆದು ಬಂಗಲೆಯೊಳಗೆ ನುಗ್ಗಿದ್ದಾರೆ. ಬಳಿಕ ಕಳ್ಳರು ಮೇರಿ ಕೋಮ್ ಅವರ ಬಂಗಲೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಟಿವಿ, ಇನ್ನಿತರೆ ವಸ್ತುಗಳು ಸೇರಿದಂತೆ ಹಲವು ವಸ್ತುಗಳನ್ನು ಹೊತ್ತೊಯ್ಯುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮನೆಯ ಬಳಿ ಏಣಿ ಇಟ್ಟಿರುವುದು ಸೇರಿದಂತೆ ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿದ ನೆರೆಮನೆಯವರು, ಈ ಕುರಿತು ಮೇರಿ ಕೋಮ್ ಅವರ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮೇರಿ ಕೋಮ್ ವ್ಯವಸ್ಥಾಪಕರು ಈ ಕುರಿತು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ನೆರೆಮನೆಯವರು ಸೆಪ್ಟೆಂಬರ್ 27ರಂದು ತಮ್ಮ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಾಗ ಈ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ.
ಬಂಗಲೆಗೆ ಬೀಗ ಹಾಕಿದ್ದರೂ, ದುಷ್ಕರ್ಮಿಗಳು ಕಿಟಕಿಯೊಂದನ್ನು ಜಖಂಗೊಳಿಸಿ, ಮೊದಲ ಮಹಡಿಯ ಬಾಲ್ಕನಿಯಲ್ಲಿನ ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಂಕಿತರು ಸ್ಕೂಟರ್ ನಲ್ಲಿ ಪರಾರಿಯಾಗಿರುವ ದೃಶ್ಯವೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸಂಬಂಧ ಫರೀದಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಪತ್ತೆಗೆ ಬಲೆ ಬೀಸಿದ್ದಾರೆ.







