ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಶಿಪ್: ಗಡಗುಟ್ಟುವ ಚಳಿಯ ರಾತ್ರಿಯಲ್ಲಿ ಬಾಕ್ಸರ್ಗಳು, ಕೋಚ್ಗಳನ್ನು ವಸತಿಯಿಂದ ತೆರವುಗೊಳಿಸಿದ ಸಂಘಟಕರು; ವರದಿ

Photo Credit : indianexpress.com
ಹೊಸದಿಲ್ಲಿ: ಗ್ರೇಟರ್ ನೊಯ್ಡಾದಲ್ಲಿ ಎಲೈಟ್ ನ್ಯಾಷನಲ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿರುವ ಹಲವಾರು ಬಾಕ್ಸರ್ಗಳು,ಕೋಚ್ಗಳು ಮತ್ತು ಪೂರಕ ಸಿಬ್ಬಂದಿಗಳನ್ನು ಟೂರ್ನಮೆಂಟ್ ಸಮಾರೋಪದ ಮುನ್ನಾ ದಿನವಾದ ಶುಕ್ರವಾರ ಸಂಜೆ ಅವರು ತಂಗಿದ್ದ ಕೋಣೆಗಳಿಂದ ತೆರವುಗೊಳಿಸಲಾಗಿದ್ದು, ಹಲವರು ರಾತ್ರಿ ಗಡಗುಟ್ಟುವ ಚಳಿಯಲ್ಲಿ ಕಳೆಯುವಂತಾಗಿತ್ತು ಎಂದು indianexpress.com ವರದಿ ಮಾಡಿದೆ.
ತಮ್ಮ ಬ್ಯಾಗ್ಗಳನ್ನು ತಮ್ಮ ಕೊಠಡಿಗಳ ಹೊರಗೆ ಇರಿಸಲಾಗಿತ್ತು. ಶುಕ್ರವಾರದವರೆಗೆ ಕೊಠಡಿಗಳನ್ನು ಬುಕ್ ಮಾಡಿದ್ದರಿಂದ ಕ್ರೀಡಾಪಟುಗಳನ್ನು ತೆರವುಗೊಳಿಸುವಂತೆ ಸಂಘಟಕರು ಸೂಚಿಸಿದ್ದರು ಎಂದು ಲಾಡ್ಜ್ಗಳು ನಂತರ ತಮಗೆ ತಿಳಿಸಿದವು ಎಂದು ಹಲವಾರು ತಂಡಗಳು ಸುದ್ದಿಗಾರರ ಬಳಿ ಅಳಲನ್ನು ತೋಡಿಕೊಂಡವು.
‘ಪೀಡಿತ ಕ್ರೀಡಾಪಟುಗಳಿಗೆ ರಾತ್ರಿ ಸಮೀಪದ ಜಿಬಿ ವಿವಿಯಲ್ಲಿ ವಸತಿ ಕಲ್ಪಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ನಾವು ಪರಿಸ್ಥಿತಿಯ ಮೇಲೆ ನಿಕಟ ನಿಗಾ ಇರಿಸಿದ್ದೇವೆ ’ಎಂದು ಭಾರತೀಯ ಬಾಕ್ಸಿಂಗ್ ಒಕ್ಕೂಟವು (ಬಿಎಫ್ಐ) ಹೇಳಿಕೆಯಲ್ಲಿ ತಿಳಿಸಿದೆ.
ಬಿಎಫ್ಐ ಬದಲಿ ವ್ಯವಸ್ಥೆಯನ್ನು ಕಲ್ಪಿಸುವವರೆಗೆ ಬಹಳಷ್ಟು ಜನರು ಮೈ ನಡುಗಿಸುವ ಸಂಜೆಯ ಚಳಿಯಲ್ಲಿ ಹಲವಾರು ಗಂಟೆಗಳನ್ನು ಹೊರಗೇ ಕಳೆದಿದ್ದು, ತಾಪಮಾನ 6-7 ಡಿ.ಸೆ.ನಷ್ಟಿತ್ತು. ಕೆಲವರಿಗೆ ಬೆಳಗಿನ ಜಾವದವರೆಗೂ ವಸತಿ ಲಭ್ಯವಾಗಿರಲಿಲ್ಲ ಎಂದು The Indian Express ವರದಿ ಮಾಡಿದೆ.
ವಸತಿ ಸಮಸ್ಯೆಯನ್ನು ಎದುರಿಸಿದ್ದ ತಂಡಗಳಲ್ಲಿ ತೆಲಂಗಾಣ, ಕೇರಳ, ಜಾರ್ಖಂಡ್, ಮಧ್ಯಪ್ರದೇಶ, ಕರ್ನಾಟಕ, ಗೋವಾ, ಪಂಜಾಬ್, ತಮಿಳುನಾಡು ಮತ್ತು ಛತ್ತೀಸ್ಗಡಗಳಿಂದ ಆಗಮಿಸಿದ್ದ ತಂಡಗಳು ಸೇರಿದ್ದವು.
ಶುಕ್ರವಾರ ಸಂಜೆ 7:30ರ ಸುಮಾರಿಗೆ ಕ್ರೀಡಾಪಟುಗಳು ತಾವು ಉಳಿದುಕೊಂಡಿದ್ದ ಲಾಡ್ಜ್ಗಳಿಗೆ ಮರಳಿದಾಗ ಸಮಸ್ಯೆ ಎದುರಾಗಿತ್ತು, ಅವರಲ್ಲಿ ಶನಿವಾರ ಅಂತಿಮ ಪಂದ್ಯದಲ್ಲಿ ಭಾಗವಹಿಸಲಿದ್ದ ಬಾಕ್ಸರ್ಗಳೂ ಸೇರಿದ್ದರು ಎಂದು ಓರ್ವ ಕೋಚ್ ತಿಳಿಸಿದರು.
ಟೂರ್ನ್ಮೆಂಟ್ನಲ್ಲಿ ಪಾಲ್ಗೊಳ್ಳುವ ಬಾಕ್ಸರ್ಗಳು ಮತ್ತು ಅಧಿಕಾರಿಗಳಿಗೆ ಉಚಿತ ವಸತಿ ಮತ್ತು ಊಟವನ್ನು ಒದಗಿಸುವುದಾಗಿ ಸಂಘಟಕರು ತಿಳಿಸಿದ್ದರು.







