3ನೇ ವಯಸ್ಸಿನಲ್ಲೇ ಎಪಿಜೆ ಅಬ್ದುಲ್ ಕಲಾಂರಿಂದ ಫೌಜಿ ಎಂದು ಕರೆಸಿಕೊಂಡಿದ್ದ ಬಾಲಕ 22ನೇ ವಯಸ್ಸಿನಲ್ಲೇ ಲೆಫ್ಟಿನೆಂಟ್!

image credit: X@IMA_IndianArmy
3ನೇ ವಯಸ್ಸಿನಲ್ಲೇ ಎಪಿಜೆ ಅಬ್ದುಲ್ ಕಲಾಂರಿಂದ ಫೌಜಿ ಎಂದು ಕರೆಸಿಕೊಂಡಿದ್ದ ಬಾಲಕ 22ನೇ ವಯಸ್ಸಿನಲ್ಲೇ ಲೆಫ್ಟಿನೆಂಟ್!
ಡೆಹ್ರಾಡೂನ್: ಸರಿಸುಮಾರು ಹತ್ತೊಂಭತ್ತು ವರ್ಷಗಳ ಹಿಂದೆ ಅಂದಿನ ರಾಷ್ಟ್ರಪತಿಯಾಗಿದ್ದ ಎಪಿಜೆ ಅಬ್ದುಲ್ ಕಲಾಂ ಅವರು ಮಿಲಿಟರಿ ಅಕಾಡಮಿಯ ಪಾಸಿಂಗ್ ಔಟ್ ಪರೇಡ್ನಲ್ಲಿ ತಂದೆಯ ಜತೆ ನಿಂತಿದ್ದ ಮೂರು ವರ್ಷದ, ಹೊಳೆಯುವ ಕಣ್ಣುಗಳ ಬಾಲಕನೊಬ್ಬನ ಕೈಹಿಡಿದು "ಯೇ ಫೌಜಿ ಕಾ ಹಾಥ್ ಹೇ" (ಇದು ಸೈನಿಕನ ಕೈ) ಎಂದು ಬಣ್ಣಿಸಿದ್ದರು. ಶನಿವಾರ ಇಂಥದ್ದೇ ಪರೇಡ್ನಲ್ಲಿ ಕಲಾಂ ಅವರ ಮಾತುಗಳು ಅಕ್ಷರಶಃ ನಿಜವಾಗಿರುವುದು ಎಲ್ಲರ ಗಮನ ಸೆಳೆಯಿತು. ಆ ಯುವಕ ಭಾರತೀಯ ಸೇನೆಗೆ ನಿಯೋಜನೆಗೊಂಡಿರುವುದಕ್ಕೆ ಇಡೀ ಮೈದಾನ ಸಾಕ್ಷಿಯಾಯಿತು.
ಈ ಸ್ಫೂರ್ತಿದಾಯಕ ವಿಚಾರ ಲೆಫ್ಟಿನೆಂಟ್ ಹರ್ಮನ್ ಮೀತ್ ಸಿಂಗ್ ಅವರಿಗೆ ಸಂಬಂಧಿಸಿದ್ದು.
ಲೆಫ್ಟಿನೆಂಟ್ ಹರ್ಮನ್ ಮೀತ್ ಸಿಂಗ್ ಅವರ ನಿಯೋಜನೆಯ ಮೂಲಕ ಭಾರತ ಸ್ವಾತಂತ್ರ್ಯ ಗಳಿಸಿದ ಆರಂಭಿಕ ದಿನಗಳಿಂದ ಸೇನೆಗೆ ಕೊಡುಗೆ ನೀಡುವ ಈ ಕುಟುಂಬದ ಸಂಪ್ರದಾಯ ಮುಂದುವರಿದಂತಾಗಿದೆ. ಈ ಕುಟುಂಬದಿಂದ ಹಸಿರು ಸಮವಸ್ತ್ರ ಧರಿಸಿದ ನಾಲ್ಕನೇ ಪೀಳಿಗೆಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಹರ್ಮನ್ ಮೀತ್ ಸಿಂಗ್ ಪಾತ್ರರಾದರು.
ಹರ್ಮನ್ ಪ್ರೀತ್ ಅವರ ಮುತ್ತಜ್ಜ ದಿವಂಗತ ಸುಬೇದರ್ ಪ್ರತಾಪ್ ಸಿಂಗ್ 1948ರಲ್ಲಿ ಸೇನೆಗೆ ಸೇರಿದ್ದರು. ಬಳಿಕ ಹರ್ಮನ್ ಮೀತ್ ಅಜ್ಜ ದಿವಂಗತ ಸಿಪಾಯಿ ದಲ್ಜೀತ್ ಸಿಂಗ್ ಹಾಗೂ ಅವರ ಸಣ್ಣಜ್ಜ ಮೇಜರ್ ಭಗವಂತ್ ಸಿಂಗ್ ಹಾಗೂ ಕರ್ನಲ್ ಉಜಗರ್ ಸಿಂಗ್ ಈ ಪರಂಪರೆ ಮುಂದುವರಿಸಿದರು.
ಕಾನ್ಪುರದಲ್ಲಿ ಜನಿಸಿದ ಹರ್ಮನ್ ಮೀತ್, ಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯುನಿಕೇಶನ್ ಇಂಜಿನಿಯರಿಂಗ್ನ ಕೆಡೆಟ್ ಗಳ ತರಬೇತಿ ವಿಭಾಗದಲ್ಲಿ ಟೆಕ್ನಿಕಲ್ ಎಂಟ್ರಿ ಯೋಜನೆಯಡಿ ಬೆಳ್ಳಿಪದಕ ಗಳಿಸಿದರು. ಇವರು 6 ಮರಾಠಾ ಲೈಟ್ ಇನ್ ಫ್ಯಾಂಟ್ರಿಯಲ್ಲಿ ಸೇವೆ ಸಲ್ಲಿಸಲಿದ್ದು, ಈ ರೆಜಿಮೆಂಟ್ ನ ಕಮಾಂಡಿಂಗ್ ಅಧಿಕಾರಿಯಾಗಿ ಇವರ ತಂದೆ ಕರ್ನಲ್ ಹರ್ಮೀತ್ ಸಿಂಗ್ ಕೂಡಾ ಕಾರ್ಯ ನಿರ್ವಹಿಸಿದ್ದರು!
ಕರ್ನಲ್ ಹರ್ಮೀತ್ ಸಿಂಗ್ ಮಿಲಿಟರಿ ಅಕಾಡಮಿಯಿಂದ 2000ನೇ ಇಸವಿಯ ಡಿಸೆಂಬರ್ 9ರಂದು ಅಂದರೆ ಮಗ ನಿಯೋಜನೆಯಾಗುವ ಸರಿಯಾಗಿ 25 ವರ್ಷ ಹಿಂದೆ ಪದವಿ ಪಡೆದಿದ್ದರು. ಸೇನೆಯು ಹರ್ಮನ್ ಮೀತ್ ಅವರ ಜಗತ್ತಿನ ಅವಿಭಾಜ್ಯ ಅಂಗವಾಗಿತ್ತು ಎಂದು ಅವರು ಬಣ್ಣಿಸಿದರು. ತಂದೆಯನ್ನು ಸಮವಸ್ತ್ರದಲ್ಲಿ ನೋಡುತ್ತಿದ್ದ ಹರ್ಮನ್ ಪ್ರೀತ್, ಸೇನೆಯ ಸಮವಸ್ತ್ರ ಹಾಗೂ ಬ್ಯಾಡ್ಜ್ ಗಳನ್ನು ಹೋಲುವ ದಿರಿಸನ್ನೇ ಧರಿಸುತ್ತಿದ್ದ. "ಅದು ಆತನ ಫೇವರಿಟ್ ದಿರಿಸು. ಕಿಂಡರ್ ಗಾರ್ಟನ್ ನಲ್ಲಿ ಕಲಿಯುತ್ತಿದ್ದಾಗ ಮೂರನೇ ವಯಸ್ಸಿನಲ್ಲೇ ಶಿಕ್ಷಕರ ಬಳಿ ಜಂಟಲ್ ಮೆನ್ ಕೆಡೆಟ್ ಆಗುವ ಬಯಕೆ ವ್ಯಕ್ತಪಡಿಸಿದ್ದ" ಎಂದು ಕರ್ನಲ್ ಹರ್ಮೀತ್ ಹೆಮ್ಮೆಯಿಂದ ಹೇಳಿದ್ದಾರೆ.







