ರೈಲ್ವೆ ಹಳಿಯ ಬಳಿ ಇನ್ಸ್ಟಾಗ್ರಾಮ್ ರೀಲ್ ಮಾಡುತ್ತಿದ್ದ ವೇಳೆ ರೈಲು ಢಿಕ್ಕಿ: ಬಾಲಕ ಮೃತ್ಯು

Photo Credit : indiatoday.in
ಪುರಿ (ಒಡಿಶಾ): ರೈಲ್ವೆ ಹಳಿಯ ಸಮೀಪ ಇನ್ಸ್ಟಾಗ್ರಾಮ್ ರೀಲ್ ಚಿತ್ರೀಕರಿಸುತ್ತಿದ್ದ ಬಾಲಕನೊಬ್ಬನಿಗೆ ವೇಗವಾಗಿ ಚಲಿಸುತ್ತಿದ್ದ ರೈಲು ಢಿಕ್ಕಿ ಹೊಡೆದ ಪರಿಣಾಮ, ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ಒಡಿಶಾದ ಪುರಿ ಜಿಲ್ಲೆಯ ಜಾನಕದೇಯಿಪುರ್ ರೈಲ್ವೆ ನಿಲ್ದಾಣದ ಬಳಿ ನಡೆದಿದೆ ಎಂದು ತಡವಾಗಿ ವರದಿಯಾಗಿದೆ.
ಮಂಗಳವಾರ ಬೆಳಗ್ಗೆ ತನ್ನ ತಾಯಿಯೊಂದಿಗೆ ದಕ್ಷಿಣ ಕಾಳಿ ದೇವಾಲಯಕ್ಕೆ ಭೇಟಿ ನೀಡಿದ್ದ ಬಾಲಕ, ದೇವರ ದರ್ಶನ ಮುಗಿಸಿಕೊಂಡು ದೇವಾಲಯದಿಂದ ಮರಳುವಾಗ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಬಾಲಕನು ರೈಲ್ವೆ ಹಳಿಯ ತೀರಾ ಸನಿಹದಲ್ಲಿ ನಿಂತುಕೊಂಡು ತನ್ನ ಮೊಬೈಲ್ ನಲ್ಲಿ ವಿಡಿಯೊ ಚಿತ್ರೀಕರಿಸುತ್ತಿದ್ದಾಗ, ವೇಗವಾಗಿ ಬಂದ ರೈಲು ಆತನಿಗೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಈ ಢಿಕ್ಕಿಯ ತೀವ್ರತೆಗೆ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಾಲಕನು ಸುರಕ್ಷತಾ ಎಚ್ಚರಿಕೆಗಳನ್ನು ಉಲ್ಲಂಘಿಸಿ, ಅಜಾಗರೂಕತೆಯಿಂದ ರೈಲ್ವೆ ಹಳಿಗಳ ಬಳಿ ಸಾಮಾಜಿಕ ಮಾಧ್ಯಮ ವಿಡಿಯೊವೊಂದನ್ನು ಚಿತ್ರೀಕರಿಸುವ ಪ್ರಯತ್ನ ನಡೆಸಿದ್ದರಿಂದ ಈ ಘಟನೆ ನಡೆದಿದೆ ಎಂಬ ಸಂಗತಿ ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ.







