ಕೇರಳ | ಮೆದುಳು ತಿನ್ನುವ ಅಮೀಬಾಕ್ಕೆ ಮತ್ತೊಬ್ಬಳು ಬಾಲಕಿ ಬಲಿ

ಸಾಂದರ್ಭಿಕ ಚಿತ್ರ | PC : AI
ತಿರುವನಂತಪುರ, ಆ. 16: ಕೆಲವು ದಿನಗಳ ಹಿಂದೆ ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದ 9 ವರ್ಷದ ಬಾಲಕಿ ಅಪರೂಪದ ಮೆದುಳು ಸೋಂಕು ಅಮೀಬಿಕ್ ಎನ್ಸೆಫೆಲಿಟಿಸ್ ನಿಂದ ಮೃತಪಟ್ಟಿದ್ದಾಳೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಜ್ವರದ ಹಿನ್ನೆಲೆಯಲ್ಲಿ ಈ ಬಾಲಕಿಯನ್ನು ಆಗಸ್ಟ್ 13ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಕೆಯ ಪರಿಸ್ಥಿತಿ ಹದಗೆಟ್ಟಿರುವುದರಿಂದ, ಆಗಸ್ಟ್ 14ರಂದು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು. ಅಲ್ಲಿ ಆಕೆ ಅದೇ ದಿನ ಮೃತಪಟ್ಟಳು ಎಂದು ಅವರು ತಿಳಿಸಿದ್ದಾರೆ.
ವೈದ್ಯಕೀಯ ಕಾಲೇಜಿನ ಸೂಕ್ಷ್ಮ ಜೀವ ವಿಜ್ಞಾನ ಪ್ರಯೋಗಾಲಯದಲ್ಲಿ ಶುಕ್ರವಾರ ತಡ ರಾತ್ರಿ ನಡೆಸಿದ ಪರೀಕ್ಷೆಯಲ್ಲಿ ಬಾಲಕಿ ಅಮೀಬಿಕ್ ಎನ್ಸೆಫೆಲಿಟಿಸ್ ರೋಗದಿಂದ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ತಾಮರಶ್ಶೇರಿ ನಿವಾಸಿಯಾಗಿದ್ದ ಈ ಬಾಲಕಿಗೆ ರೋಗದ ಸೋಂಕು ತಗುಲಿದ ಕೊಳ ಅಥವಾ ಸರೋವರದಂತಹ ನೀರಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ಈ ನೀರಿನ ಮೂಲವನ್ನು ಗುರುತಿಸಿದ ಬಳಿಕ, ಅದರಲ್ಲಿ ಇತ್ತೀಚೆಗೆ ಸ್ನಾನ ಮಾಡಿದವರನ್ನು ಪತ್ತೆ ಹಚ್ಚಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದು ಜಿಲ್ಲೆಯಲ್ಲಿ ಈ ವರ್ಷ ವರದಿಯಾದ ಅಪರೂಪದ ಮೆದುಳು ಸೋಂಕಿನ ಪ್ರಕರಣದಲ್ಲಿ ಬಹುಶಃ ನಾಲ್ಕನೇಯದ್ದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೀಬಿಕ್ ಎನ್ಸೆಫೆಲಿಟಿಸ್ ಅಮೀಬಾದಿಂದ ಉಂಟಾಗುವ ರೋಗ. ಈ ಅಮೀಬಾ ಕಲುಷಿತ ನೀರಿನಾಗರದಲ್ಲಿ ವಾಸಿಸುತ್ತದೆ. ಇದು ಅಪರೂಪದ ಮೆದುಳಿನ ಸೋಂಕಿಗೆ ಕಾರಣವಾಗುತ್ತದೆ.







