942 ಮಂದಿಗೆ ಶೌರ್ಯ, ಸೇವಾಪುರಸ್ಕಾರ ಘೋಷಣೆ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ : ಗಣರಾಜ್ಯೋತ್ಸವದ ಮುನ್ನಾ ದಿನವಾದ ಶನಿವಾರ ಪೊಲೀಸರು, ಅಗ್ನಿಶಾಮಕದಳ ಹಾಗೂ ನಾಗರಿಕ ರಕ್ಷಣಾ ಸಿಬ್ಬಂದಿ ಸಹಿತ ಒಟ್ಟು 942 ಮಂದಿಗೆ ವಿವಿಧ ಶ್ರೇಣಿಗಳ ಶೌರ್ಯ ಹಾಗೂ ಸೇವಾ ಪದಕಗಳನ್ನು ಘೋಷಿಸಲಾಗಿದೆ.
ಇವರಲ್ಲಿ 95 ಮಂದಿ ಶೌರ್ಯ ಪ್ರಶಸ್ತಿ ಪುರಸ್ಕೃತರೆಂದು ಕೇಂದ್ರ ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಶೌರ್ಯ ಪ್ರಶಸ್ತಿ ವಿಜೇತರ ಪೈಕಿ 28 ಸಿಬ್ಬಂದಿ ನಕ್ಸಲ್ಪೀಡಿತ ಪ್ರದೇಶಗಳಲ್ಲಿ ನಿಯೋಜಿತರಾದವರು. ಜಮ್ಮುಕಾಶ್ಮೀರ ಪ್ರಾಂತದಲ್ಲಿ 28 ಮಂದಿ, ಈಶಾನ್ಯ ಭಾರತದಲ್ಲಿ ಮೂವರು ಹಾಗೂ 36 ಮಂದಿ ಇತರ ಪ್ರಾಂತಗಳಲ್ಲಿ ನಿಯೋಜಿತರಾದವರಾಗಿದ್ದಾರೆ.
ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ ಪುರಸ್ಕೃತ 101 ಮಂದಿಯ ಪೈಕಿ, 85 ಮಂದಿಗೆ ಪೊಲೀಸ್ ಸಿಬ್ಬಂದಿಗಳಾಗಿದ್ದು, ಐವರು ಅಗ್ನಿಶಾಮಕದಳ, ಏಳು ಮಂದಿ ನಾಗರಿಕ ರಕ್ಷಣೆ ಹಾಗೂ ಗೃಹರಕ್ಷಕದಳ ಮತ್ತು 36 ಮಂದಿ ಕೈದಿಗಳ ಪುನರ್ವಸತಿ ಸೇವೆಗೆ ಸೇರಿದವರೆಂದು ಹೇಳಿಕೆ ತಿಳಿಸಿದೆ.
ಪ್ರಾಣ ಹಾಗೂ ಆಸ್ತಿಪಾಸ್ತಿಯ ರಕ್ಷಣೆ ಅಥವಾ ಅಪರಾಧವನ್ನು ತಡೆಗಟ್ಟಿದ ಇಲ್ಲವೇ ಕ್ರಿಮಿನಲ್ಗಳನ್ನು ಬಂಧಿಸುವಲ್ಲಿ ಪರಾಕ್ರಮವನ್ನು ಮೆರೆದಂತಹ ಸಿಬ್ಬಂದಿಗೆ ಶೌರ್ಯ ಪುರಸ್ಕಾರವನ್ನು ಘೋಷಿಸಲಾಗಿದೆ.
ಸೇವೆಯಲ್ಲಿ ವಿಶಿಷ್ಟ ಉತ್ಕೃಷ್ಟ ಸಾಧನೆಯನ್ನು ಪ್ರದರ್ಶಿಸಿದಕ್ಕಾಗಿ ರಾಷ್ಟ್ರಪತಿಯವರ ವಿಶೇಷ ಸೇವಾ ಪದಕವನ್ನು ನೀಡಲಾಗುತ್ತಿದೆ. ಕರ್ತವ್ಯದಲ್ಲಿ ಶ್ರದ್ಧೆ ಹಾಗೂ ಸಂಪನ್ಮೂಲವ್ಯಕ್ತಿಯಾಗಿ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದವರಿಗೆ ಪ್ರಶಂಸನೀಯ ಸೇವಾ ಪುರಸ್ಕಾರವನ್ನು ನೀಡಲಾಗುತ್ತದೆ.







