ಅಮಾನತು ರದ್ದು; ಕ್ರೀಡಾ ಸಚಿವಾಲಯದ ನಿರ್ಧಾರ ಸ್ವಾಗತಿಸಿದ ಬ್ರಿಜ್ ಭೂಷಣ್ ಸಿಂಗ್

ಬ್ರಿಜ್ ಭೂಷಣ್ ಸಿಂಗ್ | PC : PTI
ಹೊಸದಿಲ್ಲಿ : ಭಾರತೀಯ ಕುಸ್ತಿ ಒಕ್ಕೂಟದ ಅಮಾನತು ರದ್ದುಪಡಿಸಿರುವ ಕ್ರೀಡಾ ಸಚಿವಾಲಯದ ನಿರ್ಧಾರವನ್ನು ಶ್ಲಾಘಿಸಿರುವ ಫೆಡರೇಶನ್ನ ಮಾಜಿ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್, ಪಿತೂರಿಗಾರರಿಗೆ ಸೋಲಾಗಿದೆ, ನ್ಯಾಯ ದೊರಕಿದೆ ಎಂದು ಹೇಳಿದ್ದಾರೆ.
ದೇಶದ ಅಗ್ರ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪುನಿಯಾ ಹಾಗೂ ಸಾಕ್ಷಿ ಮಲಿಕ್ ಅವರು ಬ್ರಿಜ್ಭೂಷಣ್ ತನ್ನ ಅಧಿಕಾರಾವಧಿಯಲ್ಲಿ ಜೂನಿಯರ್ ಕುಸ್ತಿಪಟುಗಳನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ಆರೋಪಿಸಿದ್ದರು. 2023ರ ಜನವರಿಯಲ್ಲಿ ದಿಲ್ಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿ ಬ್ರಿಜ್ಭೂಷಣ್ನನ್ನು ಬಂಧಿಸಿ, ಡಬ್ಲ್ಯುಎಫ್ಐನ ಸಂಪೂರ್ಣ ವಿಸರ್ಜನೆಗೆ ಆಗ್ರಹಿಸಿದ್ದರು.
ಬ್ರಿಜ್ಭೂಷಣ್ ನಿಷ್ಟಾವಂತ ಸಂಜಯ್ ಸಿಂಗ್ 2023ರ ಕೊನೆಯಲ್ಲಿ ನಡೆದಿದ್ದ ಚುನಾವಣೆಯಲ್ಲಿ ಗೆದ್ದಿದ್ದರೂ ಕೂಡ ಈ ವಿಷಯ ಈಗಲೂ ನ್ಯಾಯಾಲಯದಲ್ಲಿದೆ.
‘‘26 ತಿಂಗಳುಗಳ ಕಾಲ ಅನೇಕ ಪಿತೂರಿಗಳನ್ನು ಮಾಡಲಾಯಿತು. ಸುಳ್ಳು ಆರೋಪ ಹೊರಿಸಲಾಯಿತು. ಭಾರತೀಯ ಕುಸ್ತಿಯನ್ನು ಸ್ಥಗಿತಗೊಳಿಸಲು ಪ್ರಯತ್ನಿಸಲಾಯಿತು. ಆದರೆ ಪಿತೂರಿಗಾರರು ತಮ್ಮ ಗುರಿ ಸಾಧಿಸಲು ಯಶಸ್ವಿಯಾಗಲಿಲ್ಲ’’ ಎಂದು ಬ್ರಿಜ್ಭೂಷಣ್ ವರದಿಗಾರರಿಗೆ ತಿಳಿಸಿದರು.
‘‘ಈ ವಿವಾದದಿಂದಾಗಿ ಭಾರತೀಯ ತಂಡಗಳು ಅಂತರ್ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ತರಬೇತಿ ಶಿಬಿರಗಳು ಸ್ಥಗಿತಗೊಳಿಸಲಾಯಿತು. ಇದೀಗ ಹೋಳಿ ಹಬ್ಬಕ್ಕಿಂತ ಮೊದಲು ಕುಸ್ತಿಗೆ ಸಂಬಂಧಿಸಿ ಎಲ್ಲ ಜನರಿಗೆ ಉಡುಗೊರೆ ನೀಡಲಾಗಿದೆ’’ಎಂದರು.







