ನಾನು ವೇಶ್ಯೆಯಂತೆ ಭಾವಿಸುವಂತೆ ಮಾಡಲಾಗಿತ್ತು: ವಿಶ್ವಸುಂದರಿ ಸ್ಪರ್ಧೆಯಿಂದ ಹೊರನಡೆದ ಬ್ರಿಟನ್ ಸ್ಪರ್ಧಿ
“ಶ್ರೀಮಂತ ಪ್ರಾಯೋಜಕರ ಮುಂದೆ ಮೆರವಣಿಗೆ ಮಾಡಲಾಗಿತ್ತು”

ಮಿಲಾ ಮ್ಯಾಗೀ | PC : YOUTUBE
ಹೊಸದಿಲ್ಲಿ: ಕಳೆದ ವರ್ಷ ಪ್ರತಿಷ್ಠಿತ ಮಿಸ್ ಇಂಗ್ಲೆಂಡ್ ಪ್ರಶಸ್ತಿಯನ್ನು ಗೆದ್ದು ಇದೀಗ ಭಾರತದಲ್ಲಿ ಆಯೋಜಿಸಲಾಗಿರುವ ವಿಶ್ವಸುಂದರಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಿಲಾ ಮ್ಯಾಗೀ(24) ಸ್ಪಧೆಯಿಂದ ಹೊರನಡೆದಿದ್ದಾರೆ. ಸಂಘಟಕರು ತನ್ನನ್ನು ಶೋಷಿಸುತ್ತಿದ್ದರು ಮತ್ತು ತಾನೋರ್ವ ವೇಶ್ಯೆಯಂಬಂತೆ ತಾನು ಭಾವಿಸುವಂತೆ ಮಾಡಿದ್ದರು ಎಂದು ಅವರು ಆರೋಪಿಸಿದ್ದಾರೆ. ಕಾರ್ನ್ವಾಲ್ನಲ್ಲಿ ಜೀವರಕ್ಷಕಿಯಾಗಿರುವ ಮ್ಯಾಗೀ ಆರಂಭದಲ್ಲಿ ಹೈದರಾಬಾದ್ನಲ್ಲಿ ನಡೆಯುತ್ತಿರುವ ವಿಶ್ವಪ್ರಸಿದ್ಧ ಸೌಂದರ್ಯ ಸ್ಪರ್ಧೆಯಿಂದ ಹಠಾತ್ ನಿರ್ಗಮನಕ್ಕೆ ತನ್ನ ‘ವೈಯಕ್ತಿಕ ಕಾರಣಗಳನ್ನು’ ದೂಷಿಸಿದ್ದರು, ಬಳಿಕ ಸ್ಪರ್ಧೆಯು ಇನ್ನೂ ಓಬೀರಾಯನ ಕಾಲದಲ್ಲಿಯೇ ಇದೆ ಎಂದು ಹೇಳಿದ್ದರು.
74 ವರ್ಷಗಳಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದ ಮೊದಲ ಮಿಸ್ ಇಂಗ್ಲೆಂಡ್ ಆಗಿರುವ ಮ್ಯಾಗೀ ಬ್ರಿಟಿಷ್ ಪತ್ರಿಕೆ ‘ದಿ ಸನ್’ಗೆ ನೀಡಿದ ಸಂದರ್ಶನದಲ್ಲಿ, ‘ಬದಲಾವಣೆಯನ್ನು ತರಲು ನಾನು ಅಲ್ಲಿಗೆ ಹೋಗಿದ್ದೆ. ಆದರೆ ನಾವು ಪ್ರದರ್ಶನ ನೀಡುವ ಕೋತಿಗಳಂತೆ ಕುಳಿತುಕೊಳ್ಳಬೇಕಾಗಿತ್ತು. ನಾನು ವೇಶ್ಯೆಯೇನೋ ಎಂಬಂತೆ ಭಾಸವಾಗಿತ್ತು ಮತ್ತು ನೈತಿಕ ದೃಷ್ಟಿಕೋನದಿಂದ ನಾನು ಈ ಸ್ಪರ್ಧೆಯ ಭಾಗವಾಗಿರಲು ಸಾಧ್ಯವಿಲ್ಲ’, ಎಂದು ಹೇಳಿದರು.
ಶ್ರೀಮಂತ ಪುರುಷ ಪ್ರಾಯೋಜಕರ ಮುಂದೆ ಮೆರವಣಿಗೆ ಮಾಡಿದ ಬಳಿಕ ಮ್ಯಾಗೀ ತನ್ನ ಆಕ್ರೋಶವನ್ನು ತೋಡಿಕೊಳ್ಳಲು ಮುಂದಾದರು ಎನ್ನಲಾಗಿದೆ. ಸ್ಪರ್ಧೆಗೆ ಬೆಂಬಲವಾಗಿ ನಿಂತಿರುವ ಶ್ರೀಮಂತ ಪೋಷಕರನ್ನು ಆಕರ್ಷಿಸುವ ಪ್ರಯತ್ನವಾಗಿ ಭಾರೀ ಮೇಕಪ್ ಮಾಡಿಕೊಳ್ಳುವಂತೆ ಮತ್ತು ಬೆಳಿಗ್ಗೆಯಿಂದ ರಾತ್ರಿಯವರೆಗೆ ಇವನಿಂಗ್ ಗೌನ್ಗಳನ್ನು ಧರಿಸಿಕೊಂಡಿರುವಂತೆ ಸ್ಪರ್ಧಿಗಳಿಗೆ ಸೂಚಿಸಲಾಗಿತ್ತು ಎಂದು ಮ್ಯಾಗೀ ಬಹಿರಂಗಗೊಳಿಸಿದರು.
’ಮ್ಯಾಗೀ ವೈಯಕ್ತಿಕ ಕಾರಣಗಳಿಂದ ಬ್ರಿಟನ್ಗೆ ಮರಳಲು ನಿರ್ಧರಿಸಿದ್ದಾರೆ ಎಂದು ಪ್ರಕಟಿಸಲು ನಾವು ವಿಷಾದಿಸುತ್ತೇವೆ. ಅವರ ನಿರ್ಧಾರವನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಆರೋಗ್ಯವು ಯಾವಾಗಲೂ ಮುಖ್ಯವಾಗಿರಬೇಕು’ ಎಂದು ಮಿಸ್ ಇಂಗ್ಲೆಂಡ್ ನ ನಿರ್ದೇಶಕಿ ಆ್ಯಂಜಿ ಬೀಸ್ಲಿ ಹೇಳಿದರು.
►ಇದು ತುಂಬ ತಪ್ಪು
‘ಆರು ಅತಿಥಿಗಳ ಪ್ರತಿ ಟೇಬಲ್ ಗೆ ಇಬ್ಬರು ಹುಡುಗಿಯರಿದ್ದರು. ನಾವು ಇಡೀ ಸಂಜೆ ಅವರೊಂದಿಗೆ ಕುಳಿತಿರಬೇಕು ಮತ್ತು ಧನ್ಯವಾದದ ರೂಪದಲ್ಲಿ ಅವರನ್ನು ಮನರಂಜಿಸಬೇಕು ಎಂದು ನಿರೀಕ್ಷಿಸಲಾಗಿತ್ತು. ಅದನ್ನು ನಂಬಲು ನನಗೆ ಅಸಾಧ್ಯವಾಗಿತ್ತು. ಇದು ತಪ್ಪು ಎಂದು ಯೋಚಿಸಿದ್ದು ನನಗೆ ನೆನಪಿದೆ. ಜನರ ಮನರಂಜನೆಗಾಗಿ ನಾನು ಸ್ಪರ್ಧೆಯಲ್ಲಿ ಪಾಲ್ಗೊಂಡಿರಲಿಲ್ಲ’ ಎಂದು ಮ್ಯಾಗೀ ಸಂದರ್ಶನದಲ್ಲಿ ಹೇಳಿದರು.
ಮ್ಯಾಗೀ ಪ್ರಚಾರ ಕಾರ್ಯಕ್ರಮಗಳಿಗಾಗಿ ಮೇ 7ರಂದು ಹೈದರಾಬಾದ್ಗೆ ಆಗಮಿಸಿದ್ದರು ಮತ್ತು ‘ವೈಯಕ್ತಿಕ ಕಾರಣಗಳಿಂದ’ ಮೇ 16ರಂದು ಸ್ಪರ್ಧೆಯಿಂದ ಹೊರನಡೆದಿದ್ದರು.
‘ನಿಮ್ಮ ಧ್ವನಿಯನ್ನು ಬಳಸಿಕೊಂಡು ಜಗತ್ತಿನಲ್ಲಿ ಬದಲಾವಣೆ ತರುವುದಕ್ಕೆ ಹೋಲಿಸಿದರೆ ವಿಶ್ವದಲ್ಲಿಯ ಎಲ್ಲ ಕಿರೀಟಗಳು ಮತ್ತು ಹೆಗಲ ಪಟ್ಟಿಗಳಿಗೆ ಯಾವುದೇ ಅರ್ಥವಿಲ್ಲ’ ಎಂದು ಹೇಳಿದ ಮ್ಯಾಗೀ, ‘ನಾನು ಬದಲಾವಣೆಯೊಂದನ್ನು ತರಲು, ವಿಭಿನ್ನ ಭವಿಷ್ಯದ ಸೃಷ್ಟಿಗೆ ನೆರವಾಗಲು, ಬಹುಶಃ ಯವಜನರಿಗೆ ಸ್ಫೂರ್ತಿ ನೀಡಲು ಸ್ಪರ್ಧೆಗೆ ಹೋಗಿದ್ದೆ. ನಾನು ಆ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತೇನೆ ಎಂದು ನಾನೆಂದಿಗೂ ನಿರೀಕ್ಷಿಸಿರಲಿಲ್ಲ. ಈ ಜನರನ್ನು ಮೆಚ್ಚಿಸಲು ಮತ್ತು ಪ್ರದರ್ಶನ ನೀಡುವ ಕೋತಿಗಳಂತೆ ಕುಳಿತುಕೊಳ್ಳಲು ನಾವು ಅಲ್ಲಿದ್ದೆವು. ಅದನ್ನು ಸಹಿಸಲು ನನಗೆ ಸಾಧ್ಯವಾಗಲಿಲ್ಲ’ ಎಂದರು.
ವಿಶ್ವಸುಂದರಿ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮಿಸ್ ಇಂಗ್ಲೆಂಡ್ ರನ್ನರ್ ಅಪ್ ಮತ್ತು ಹಾಲಿ ಮಿಸ್ ಲಿವರ್ಪೂಲ್ ಆಗಿರುವ ಷಾರ್ಲೆಟ್ ಗ್ರಾಂಟ್(25) ಸ್ಪರ್ಧಿಸಲಿದ್ದಾರೆ. ಮುಂದಿನ ವಾರ 180ಕ್ಕೂ ಅಧಿಕ ದೇಶಗಳಲ್ಲಿ ಅಂತಿಮ ಸುತ್ತು ಪ್ರಸಾರಗೊಳ್ಳಲಿದೆ.







