ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಬ್ರಿಟನ್ನ ಎಫ್-35 ಯುದ್ಧ ವಿಮಾನ

PC : X/@elitepredatorss
ತಿರುವನಂತಪುರಂ: ಇಂಧನ ಕೊರತೆಯಿಂದಾಗಿ ಬ್ರಿಟನ್ನ ಎಫ್- 35 ಯುದ್ಧ ವಿಮಾನ ಶನಿವಾರ ರಾತ್ರಿ ತಿರುವನಂತಪುರಂನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವರದಿಯಾಗಿದೆ.
ಯುದ್ಧ ವಿಮಾನ ನೌಕೆಯಿಂದ ಮೇಲಕ್ಕೆ ಹಾರಿದ್ದ ಈ ವಿಮಾನವು ರಾತ್ರಿ ಸುಮಾರು 9.30ರ ವೇಳೆಗೆ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು ಎಂದು ರವಿವಾರ ಮೂಲಗಳು ತಿಳಿಸಿವೆ.
ಈ ಯುದ್ಧ ವಿಮಾನ ಸರಾಗವಾಗಿ ಹಾಗೂ ಸುರಕ್ಷಿತವಾಗಿ ಭೂಸ್ಪರ್ಶ ಮಾಡುವುದನ್ನು ಖಾತರಿಗೊಳಿಸಲು ವಿಮಾನ ನಿಲ್ದಾಣದಲ್ಲಿ ತುರ್ತು ಸ್ಥಿತಿ ಘೋಷಿಸಲಾಗಿತ್ತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
"ಇಂಧನ ಕೊರತೆಯುಂಟಾಗಿದೆ ಎಂದು ವರದಿ ಮಾಡಿದ್ದ ಪೈಲಟ್, ತುರ್ತು ಭೂಸ್ಪರ್ಶದ ಅನುಮತಿಗಾಗಿ ಮನವಿ ಮಾಡಿದ್ದರು. ಎಲ್ಲವನ್ನೂ ಶೀಘ್ರವಾಗಿ ಹಾಗೂ ವೃತ್ತಿಪರವಾಗಿ ನಿಭಾಯಿಸಲಾಯಿತು" ಎಂದು ಮೂಲಗಳು ತಿಳಿಸಿವೆ.
ಸದ್ಯ ವಿಮಾನವನ್ನು ವಿಮಾನ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದೆ. ಕೇಂದ್ರ ಸರಕಾರದ ಸೂಕ್ತ ಪ್ರಾಧಿಕಾರಗಳಿಂದ ಅನುಮತಿ ದೊರೆಯುತ್ತಿದ್ದಂತೆಯೇ, ಇಂಧನ ಮರು ಭರ್ತಿ ಪ್ರಕ್ರಿಯೆ ನಡೆಯಲಿದೆ ಎಂದು ಅವು ಹೇಳಿವೆ.





