ಹಂಪಿ ಸಾಮೂಹಿಕ ಅತ್ಯಾಚಾರದ ಬೆನ್ನಲ್ಲೇ ದಿಲ್ಲಿಯಲ್ಲಿ ಬ್ರಿಟಿಷ್ ಮಹಿಳೆಯ ಮೇಲೆ ಅತ್ಯಾಚಾರ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ದಿಲ್ಲಿಯ ಹೋಟೆಲ್ವೊಂದರಲ್ಲಿ ಬ್ರಿಟಿಷ್ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಇಬ್ಬರು ವ್ಯಕ್ತಿಗಳನ್ನು ಸ್ಥಳೀಯ ಪೋಲಿಸರು ಬಂಧಿಸಿದ್ದಾರೆ. ಈ ಬಗ್ಗೆ ಬ್ರಿಟನ್ ರಾಯಭಾರಿ ಕಚೇರಿಗೆ ಮಾಹಿತಿಯನ್ನು ನೀಡಿರುವ ಪೋಲಿಸರು ತನಿಖೆಯನ್ನು ನಡೆಸುತ್ತಿದ್ದಾರೆ.
ದಿಲ್ಲಿ ಪೋಲಿಸರ ಪ್ರಕಾರ, ರಜೆಯನ್ನು ಕಳೆಯಲು ಭಾರತಕ್ಕೆ ಆಗಮಿಸಿರುವ ಬ್ರಿಟಿಷ್ ಮಹಿಳೆ ಸಾಮಾಜಿಕ ಮಾಧ್ಯಮಗಳ ಮೂಲಕ ಪೂರ್ವ ದಿಲ್ಲಿಯ ವಸುಂಧರಾ ಪ್ರದೇಶದ ನಿವಾಸಿ ಕೈಲಾಷ್ ಎಂಬಾತನೊಂದಿಗೆ ಸ್ನೇಹ ಬೆಳೆಸಿದ್ದಳು. ಕೈಲಾಷ್ ಸಾಮಾಜಿಕ ಮಾಧ್ಯಮ ಪ್ರಭಾವಿಯಾಗಿದ್ದು, ಮಹಿಳೆ ಆತನ ರೀಲ್ ಗಳಿಂದ ಪ್ರಭಾವಿತಳಾಗಿದ್ದಳು ಎನ್ನಲಾಗಿದೆ.
ಮಹಾರಾಷ್ಟ್ರ ಮತ್ತು ಗೋವಾ ಪ್ರವಾಸದಲ್ಲಿದ್ದ ಮಹಿಳೆ ತನ್ನನ್ನು ಭೇಟಿಯಾಗುವಂತೆ ಕೈಲಾಷ್ನನ್ನು ಆಹ್ವಾನಿಸಿದ್ದಳು. ಆದರೆ ಕೈಲಾಷ್ ತನಗೆ ಅಲ್ಲಿಗೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದಾಗ ಮಹಿಳೆ ಆತನನ್ನು ಭೇಟಿಯಾಗಲು ದಿಲ್ಲಿಗೆ ಪ್ರಯಾಣಿಸಿದ್ದಳು. ಮಂಗಳವಾರ ದಿಲ್ಲಿ ತಲುಪಿದ್ದ ಆಕೆ ಮಹಿಪಾಲಪುರದಲ್ಲಿಯ ಹೋಟೆಲ್ವೊಂದರಲ್ಲಿ ತಂಗಿದ್ದಳು. ಆಕೆಯ ಆಹ್ವಾನದ ಮೇರೆಗೆ ಕೈಲಾಷ್ ತನ್ನ ಸ್ನೇಹಿತ ವಾಸಿಮ್ ಜೊತೆ ಹೋಟೆಲ್ನಲ್ಲಿ ಆಕೆಯನ್ನು ಭೇಟಿಯಾಗಿದ್ದು, ಒಟ್ಟಿಗೇ ಊಟವನ್ನು ಮಾಡಿದ್ದರು ಎಂದು ಪೋಲಿಸರು ತಿಳಿಸಿದರು.
ಹೋಟೆಲ್ ಕೊಠಡಿಗೆ ಮರಳುವ ಮುನ್ನ ಮೂವರೂ ಮದ್ಯಪಾನ ಮಾಡಿದ್ದರು. ಕೋಣೆಯನ್ನು ಪ್ರವೇಶಿಸಿದ ಬಳಿಕ ಕೈಲಾಷ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದ ಎಂದು ಪೋಲಿಸರು ಹೇಳಿದರು. ಮಹಿಳೆ ಕೂಗುತ್ತ ಗದ್ದಲವನ್ನೆಬ್ಬಿಸಿದಾಗ ಕೈಲಾಷ್ ವಾಸಿಮ್ನನ್ನು ಕೊಠಡಿಯೊಳಗೆ ಕರೆದಿದ್ದ ಎಂದು ಹೇಳಲಾಗಿದೆ
ಬ್ರಿಟಿಷ್ ಮಹಿಳೆಯ ಮೇಲೆ ಅತ್ಯಾಚಾರದ ಆರೋಪದಲ್ಲಿ ಕೈಲಾಷ್ನನ್ನು ಮತ್ತು ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವಾಸಿಮ್ನನ್ನು ಬಂಧಿಸಲಾಗಿದೆ. ಘಟನೆಯ ಕುರಿತು ಮಾಹಿತಿಯನ್ನು ಬ್ರಿಟಿಷ್ ರಾಯಭಾರ ಕಚೇರಿಗೂ ನೀಡಲಾಗಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದರು.
ಇತ್ತೀಚಿಗೆ ಕರ್ನಾಟಕದ ಹಂಪಿಯಲ್ಲಿ ಓರ್ವ ಇಸ್ರೇಲಿ ಮಹಿಳೆ ಮತ್ತು ಆಕೆ ಉಳಿದುಕೊಂಡಿದ್ದ ಹೋಮ್ ಸ್ಟೇ ಮಾಲಕಿಯು ತಮಗೆ ಹಣ ನೀಡಲು ನಿರಾಕರಿಸಿದ ಬಳಿಕ ಮೂವರು ದುಷ್ಕರ್ಮಿಗಳು ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಎಲ್ಲ ಮೂವರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.