ಹೆಜ್ಜೇನು ದಾಳಿ: 4 ಮತ್ತು 6 ವರ್ಷ ಪ್ರಾಯದ ಸಹೋದರರು ಮೃತ್ಯು

ಸಾಂದರ್ಭಿಕ ಚಿತ್ರ (Photo credit: freepik.com)
ಗೊಂಡಾ (ಉತ್ತರ ಪ್ರದೇಶ): ಹೆಜ್ಜೇನು ಹಿಂಡಿನ ದಾಳಿಯಲ್ಲಿ 6 ಮತ್ತು 4 ವರ್ಷದ ಸಹೋದರರು ಮೃತಪಟ್ಟು, ಅವರ ಅಜ್ಜಿ ಗಾಯಗೊಂಡಿರುವ ಘಟನೆ ಗೊಂಡಾದಲ್ಲಿ ನಡೆದಿದೆ. ಹೆಜ್ಜೇನು ದಾಳಿಯಲ್ಲಿ ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯು ಮಂಗಳವಾರದಂದು ಮಂಕಾಪುರ ಪ್ರದೇಶದ ಮಡ್ನಾಪುರ ಗ್ರಾಮದಲ್ಲಿ ನಡೆದಿದ್ದು, 65 ವರ್ಷದ ಉತ್ತಮ್ ಎಂಬ ಮಹಿಳೆಯು ತನ್ನ ಮೊಮ್ಮಕ್ಕಳಾದ 6 ವರ್ಷದ ಯೋಗೇಶ್ ಹಾಗೂ ನಾಲ್ಕು ವರ್ಷದ ಯುಗ್ ಎಂಬ ಸಹೋದರರೊಂದಿಗೆ ಮನೆಯಿಂದ ಹೊರಗೆ ಬಂದಿದ್ದರು. ಈ ಸಂದರ್ಭದಲ್ಲಿ ಹೆಜ್ಜೇನು ಹಿಂಡಿನ ದಾಳಿ ನಡೆದಿದೆ ಎಂದು ಸ್ಥಳೀಯ ಠಾಣಾಧಿಕಾರಿ ಸುಧೀರ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಕೂಡಲೇ ಎಲ್ಲರನ್ನೂ ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ, ಅಲ್ಲಿ ಯುಗ್ ಮೃತಪಟ್ಟಿದ್ದಾನೆ.
ನಂತರ ಯೋಗೇಶ್ ಹಾಗೂ ಉತ್ತಮ್ರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಯೋಗೇಶ್ ಮೃತಪಟ್ಟರೆ, ಉತ್ತಮ್ರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.





