ತೆಲಂಗಾಣ: ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಬಿಆರ್ಎಸ್ ಸಂಸದನಿಗೆ ಚೂರಿ ಇರಿತ
ಆರೋಪಿಯ ಬಳಿ ಸ್ಥಳೀಯ ವರದಿಗಾರನ ಐಡಿ ಕಾರ್ಡ್ ಪತ್ತೆ

Photo: ANI
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಆಪ್ತ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಸಂಸದ ಕೋಠಾ ಪ್ರಭಾಕರ್ ರೆಡ್ಡಿ ಅವರು ಸಿದ್ದಿಪೇಟೆಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಚೂರಿ ಇರಿತಕ್ಕೊಳಗಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಭಾಕರ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
“ಬಿಆರ್ಎಸ್ ಸಂಸದ ಕೋಠಾ ಪ್ರಭಾಕರ್ ರೆಡ್ಡಿ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪಿ ವಿ90 ನ್ಯೂಸ್ನ ಸ್ಥಳೀಯ ವರದಿಗಾರ ಎಂದು ವರದಿಯಾಗಿದೆ. ಆದರೆ ಆತ ನಕಲಿ ಐಡಿ ಕಾರ್ಡ್ ಮಾಡಿದ್ದನೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ” ಎಂದು ಸೌತ್ ಫಸ್ಟ್ ಪತ್ರಕರ್ತೆ ದೀಪಿಕಾ ಪಾಶಂ ಟ್ವೀಟ್ ಮಾಡಿದ್ದಾರೆ.
ನವೆಂಬರ್ 30 ರಂದು ನಡೆಯಲಿರುವ ಚುನಾವಣೆಗೆ ದುಬ್ಬಾಕ್ ವಿಧಾನಸಭಾ ಕ್ಷೇತ್ರದಿಂದ ಬಿಆರ್ಎಸ್ ಅಭ್ಯರ್ಥಿಯಾಗಿ ಪ್ರಭಾಕರ್ ರೆಡ್ಡಿ ಅವರು ಕಣಕ್ಕಿಳಿದಿದ್ದಾರೆ.
“ಸಂಸದ ಕೋಠಾ ಪ್ರಭಾಕರ್ ರೆಡ್ಡಿ ಸುರಕ್ಷಿತವಾಗಿದ್ದಾರೆ. ದೌಲತಾಬಾದ್ ಮಂಡಲದ ಸೂರಂಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅವರನ್ನು ಗಜ್ವೇಲ್ಗೆ ಸ್ಥಳಾಂತರಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ” ಎಂದು ಸಿದ್ದಿಪೇಟೆ ಕಮಿಷನರ್ ಎನ್ ಶ್ವೇತಾ ಎಎನ್ಐಗೆ ತಿಳಿಸಿದ್ದಾರೆ.
ಸಂಸದರಿಗೆ ಚಾಕುವಿನಿಂದ ಇರಿದ ವ್ಯಕ್ತಿಯ ಮೇಲೆ ಕೆಲವು ಸ್ಥಳೀಯರು ಹಲ್ಲೆ ನಡೆಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಪ್ರಭಾಕರ್ ರೆಡ್ಡಿ ತೆಲಂಗಾಣದ ಮೇದಕ್ನ ಹಾಲಿ ಸಂಸದರಾಗಿದ್ದಾರೆ. 2014 ರಲ್ಲಿ ಕೆಸಿಆರ್ ಮುಖ್ಯಮಂತ್ರಿಯಾಗಲು ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟ ನಂತರ ಮೇದಕ್ ಕ್ಷೇತ್ರದಿಂದ ಸಂಸದರಾದರು. ಇತ್ತೀಚೆಗಷ್ಟೇ ಅವರನ್ನು ದುಬ್ಬಾಕ್ನ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಅವರು ಭಾರತೀಯ ಜನತಾ ಪಕ್ಷದ ರಘುನಂದನ್ ರಾವ್ ವಿರುದ್ಧ ಸ್ಪರ್ಧಿಸಿದ್ದಾರೆ.
ಪ್ರಸ್ತುತ ಬಿಆರ್ಎಸ್ ಆಡಳಿತದಲ್ಲಿರುವ ತೆಲಂಗಾಣದಲ್ಲಿ ನವೆಂಬರ್ 30 ರಂದು ಮತದಾನ ನಡೆಯಲಿದೆ. ಮತಗಳ ಎಣಿಕೆ ಡಿಸೆಂಬರ್ 3 ರಂದು ನಡೆಯಲಿದೆ.
#WATCH | Telangana: BRS MP Kotha Prabhakar Reddy was stabbed in the stomach by an unidentified person during his campaign in Siddipet.
— ANI (@ANI) October 30, 2023
MP Kotha Prabhakar Reddy is safe. The incident took place in Surampally village of the Daulatabad mandal. He has been shifted to Gajwel. The… pic.twitter.com/MI0BvbFxDJ







