ಭಾರತ - ಬಾಂಗ್ಲಾ ಗಡಿಯಲ್ಲಿ ಉದ್ಭವಿಸಿರುವ ಸಮಸ್ಯೆ ಪರಿಹರಿಸಲು BSF- BGB ಸಮನ್ವಯ ಸಭೆ

PC : PTI
ಮಾಲ್ಡಾ: ಭಾರತ ಮತ್ತು ಬಾಂಗ್ಲಾ ದೇಶದ ಗಡಿಯಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಹರಿಸಲು, ಶಾಂತಿಯನ್ನು ಕಾಪಾಡಲು, ಗಡಿಯಾಚೆಗಿನ ಅಕ್ರಮ ಚಟುವಟಿಕೆಗಳನ್ನು ತಡೆಯಲು ಗಡಿ ಭದ್ರತಾ ಪಡೆ(ಬಿಎಸ್ಎಫ್) ಮತ್ತು ಬಾಂಗ್ಲಾದೇಶದ ಗಡಿ ಕಾವಲು ಪಡೆ(ಬಿಜಿಬಿ) ಸಮನ್ವಯ ಸಭೆಯನ್ನು ನಡೆಸಿದೆ.
ಬಾಂಗ್ಲಾದೇಶದ ಗಡಿ ಹೊರಠಾಣೆ ಸೋನಮಸ್ಜಿದ್ ನಲ್ಲಿ ಸಭೆ ನಡೆದಿದ್ದು, ಸಭೆಯ ಅಧ್ಯಕ್ಷತೆಯನ್ನು ಬಿಎಸ್ ಎಫ್ ಮಾಲ್ಡಾ ವಲಯದ ಡಿಐಜಿ ತರುಣ್ ಕುಮಾರ್ ಗೌತಮ್ ಮತ್ತು ಬಿಜಿಬಿ ರಾಜಶಾಹಿ ವಲಯದ ಕಮಾಂಡರ್ ಕರ್ನಲ್ ಮುಹಮ್ಮದ್ ಇಮ್ರಾನ್ ಇಬ್ನೆ ರೌಫ್ ವಹಿಸಿದ್ದರು ಎಂದು ಅರೆಸೇನಾ ಪಡೆ ಹೇಳಿಕೆಯಲ್ಲಿ ತಿಳಿಸಿದೆ.
ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವುದು, ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವುದು ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಅನಧಿಕೃತ ಸಂಚಾರವನ್ನು ತಡೆಯುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಮಾತುಕತೆ ಮತ್ತು ಒಮ್ಮತದ ಮೂಲಕ ಗಡಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಜನವರಿ 18ರಂದು ಮಾಲ್ಡಾ ಜಿಲ್ಲೆಯ ಸುಖದೇವ್ಪುರ ಗಡಿಯಲ್ಲಿ ನಡೆದ ಎರಡೂ ದೇಶಗಳ ರೈತರ ನಡುವಿನ ವಾಗ್ವಾದ, ಘರ್ಷಣೆ, ಉದ್ವಿಗ್ನ ಪರಿಸ್ಥಿತಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಬಿಎಸ್ಎಫ್ ಮತ್ತು ಬಿಜಿಬಿಯ ತ್ವರಿತ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು.







