ದಿಲ್ಲಿ | ಆಟಿಕೆ ಗನ್ ಬಳಸಿ ಚಿನ್ನಾಭರಣ ಅಂಗಡಿಯನ್ನು ದರೋಡೆ ಮಾಡಿದ ಬಿಎಸ್ಎಫ್ ಯೋಧ!

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಆನ್ ಲೈನ್ ಜೂಜಾಟದಿಂದ ನಷ್ಟ ಅನುಭವಿಸಿದ್ದ, ಕೇವಲ ಒಂದು ತಿಂಗಳ ಹಿಂದೆಯಷ್ಟೇ ಗಡಿ ಭದ್ರತಾ ಪಡೆಗೆ ಸೇರ್ಪಡೆಯಾಗಿದ್ದ ಯೋಧನೊಬ್ಬ ಕ್ರೈಮ್ ಶೋಗಳಿಂದ ಪ್ರೇರಿತನಾಗಿ ಆಟಿಕೆ ಗನ್ ಬಳಸಿ, ಹಗಲಿನ ವೇಳೆಯೇ ದಿಲ್ಲಿಯಲ್ಲಿನ ಚಿನ್ನಾಭರಣ ಅಂಗಡಿಯೊಂದನ್ನು ದರೋಡೆಗೈದಿರುವ ಘಟನೆ ನಡೆದಿದ್ದು, ಇದರ ಬೆನ್ನಿಗೇ ಆತನನ್ನು ಬಂಧಿಸಲಾಗಿದೆ ಎಂದು ಬುಧವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯನ್ನು ಗೌರವ್ ಯಾದವ್ (22) ಎಂದು ಗುರುತಿಸಲಾಗಿದ್ದು, 2023ರಲ್ಲಿ ಗಡಿ ಭದ್ರತಾ ಪಡೆ ಸೇರ್ಪಡೆಗೆ ನೋಂದಾಯಿಸಿಕೊಂಡ ನಂತರ, ಈ ವರ್ಷದ ಮೇ ತಿಂಗಳಲ್ಲಷ್ಟೇ ಅತ ತನ್ನ ತರಬೇತಿಯನ್ನು ಪೂರೈಸಿದ್ದ ಎಂದೂ ಅವರು ಹೇಳಿದ್ದಾರೆ.
"ದರೋಡೆ ಪ್ರಕರಣ ನಡೆಯುವುದಕ್ಕೂ ಒಂದು ದಿನ ಮುಂಚಿತವಾಗಿಯಷ್ಟೇ ಜೂನ್ 18ರಂದು ಗೌರವ್ ಯಾದವ್ ನನ್ನು ಫಝಿಲ್ಕಾದ ಗಡಿ ಭದ್ರತಾ ಪಡೆಗೆ ನಿಯೋಜಿಸಲಾಗಿತ್ತು. ನಂತರ, ರಜೆ ಪಡೆದಿದ್ದ ಆತ, ದಿಲ್ಲಿಗೆ ತೆರಳಿದ್ದ. ರೈಲು ಬದಲಾವಣೆಯ ಅವಧಿಯಲ್ಲಿ ರೈಲಿಗಾಗಿ ಕಾಯುವಾಗ ದರೋಡೆಯ ಯೋಜನೆ ರೂಪಿಸಿದ್ದ" ಎಂದು ಶಹ್ದಾರದ ಉಪ ಪೊಲೀಸ್ ಆಯುಕ್ತ ಪ್ರಶಾಂತ್ ಗೌತಮ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜೂನ್ 19ರಂದು ಈ ಘಟನೆ ನಡೆದಿದ್ದು, ನೈಜ ಪಿಸ್ತೂಲಿನಂತೆ ಕಂಡು ಬರುತ್ತಿದ್ದ ಆಟಿಕೆ ಗನ್ ಒಂದನ್ನು ಹಿಡಿದುಕೊಂಡಿದ್ದ ವ್ಯಕ್ತಿಯೊಬ್ಬ ಫರ್ಶ್ ಬಝಾರ್ ನಲ್ಲಿರುವ ಚಿನ್ನಾಭರಣ ಅಂಗಡಿಯೊಂದನ್ನು ಪ್ರವೇಶಿಸಿದ್ದ. ಬಳಿಕ, ನಾಲ್ಕು ಚಿನ್ನದ ಬ್ರೇಸ್ ಲೇಟ್ ಗಳನ್ನು ಕಳವು ಮಾಡಿ, ಅಲ್ಲಿಂದ ಪರಾರಿಯಾಗಿದ್ದ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಫರ್ಶ್ ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗೆ ಚಾಲನೆ ನೀಡಲಾಗಿದೆ ಎಂದೂ ಉಪ ಪೊಲೀಸ್ ಆಯುಕ್ತ ಪ್ರಶಾಂತ್ ಗೌತಮ್ ಹೇಳಿದ್ದಾರೆ.







