20,000 ಪಶುವೈದ್ಯರಿಗೆ ತರಬೇತಿ; ಮೀನುಗಾರಿಕೆಗೆ 500 ಜಲಮೂಲಗಳ ಅಭಿವೃದ್ಧಿ

Photo : PTI
ಹೊಸದಿಲ್ಲಿ, ಫೆ.1: ಗ್ರಾಮೀಣ ಆದಾಯವನ್ನು ವೈವಿಧ್ಯಗೊಳಿಸುವ ಮತ್ತು ಸಾಂಪ್ರದಾಯಿಕ ಕೃಷಿಯನ್ನು ಮೀರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕ್ರಮವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜಾನುವಾರು ಹಾಗೂ ಮೀನುಗಾರಿಕೆ ಕ್ಷೇತ್ರಗಳಿಗೆ ಸರಣಿ ಉಪಕ್ರಮಗಳನ್ನು ಘೋಷಿಸಿದ್ದಾರೆ.
ಜಾನುವಾರುಗಳು ಕೃಷಿ ಆದಾಯದ ಶೇಕಡಾ 16ರಷ್ಟು ಕೊಡುಗೆ ನೀಡುತ್ತಿರುವುದನ್ನು ಉಲ್ಲೇಖಿಸಿದ ಅವರು, ಪಶುವೈದ್ಯ ವೃತ್ತಿಪರರ ಲಭ್ಯತೆಯನ್ನು 20,000ಕ್ಕಿಂತಲೂ ಹೆಚ್ಚಿಸಲು ಸಾಲ-ಸಂಯೋಜಿತ ಬಂಡವಾಳ ಸಬ್ಸಿಡಿ ಯೋಜನೆಯನ್ನು ಘೋಷಿಸಿದ್ದಾರೆ. ಖಾಸಗಿ ವಲಯದಲ್ಲಿ ಪಶುವೈದ್ಯಕೀಯ ಕಾಲೇಜುಗಳು, ಪಶುವೈದ್ಯಕೀಯ ಆಸ್ಪತ್ರೆಗಳು, ರೋಗ ನಿರ್ಣಯ ಪ್ರಯೋಗಾಲಯಗಳು ಮತ್ತು ತಳಿ ಸೌಲಭ್ಯಗಳ ಸ್ಥಾಪನೆಗೆ ಈ ಯೋಜನೆ ಬೆಂಬಲ ನೀಡುತ್ತದೆ.
ಮೀನುಗಾರಿಕೆಗಾಗಿ ಸರ್ಕಾರವು 500 ಸರೋವರಗಳು ಮತ್ತು ಅಮೃತ ಸರೋವರಗಳ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲಿದೆ. ನವೋದ್ಯಮಗಳು, ಮಹಿಳಾ ನೇತೃತ್ವದ ಗುಂಪುಗಳು ಮತ್ತು ಮೀನು ಕೃಷಿಕರ ಉತ್ಪಾದಕ ಸಂಸ್ಥೆಗಳ ಮೂಲಕ ಮಾರುಕಟ್ಟೆ ಸಂಪರ್ಕವನ್ನು ಸಕ್ರಿಯಗೊಳಿಸಲಾಗುತ್ತದೆ. ಇದರ ಜೊತೆಗೆ, ಪಶುಸಂಗೋಪನಾ ಉದ್ಯಮಶೀಲತೆ ಅಭಿವೃದ್ಧಿಗಾಗಿ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಕಾರ್ಯಕ್ರಮವನ್ನು ಘೋಷಿಸಲಾಗಿದೆ.
ಕರಾವಳಿಯ ರೈತರಿಗೆ ಮಹತ್ವದ ಕ್ರಮವಾಗಿ, ತೆಂಗು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಹಳೆಯ ಮತ್ತು ಉತ್ಪಾದಕವಲ್ಲದ ಮರಗಳನ್ನು ಹೊಸ ಪ್ರಬೇಧಗಳೊಂದಿಗೆ ಬದಲಿಸುವ ಗುರಿಯನ್ನು ಹೊಂದಿರುವ ತೆಂಗು ಉತ್ತೇಜನಾ ಯೋಜನೆಯನ್ನು ಪ್ರಕಟಿಸಲಾಗಿದೆ.
ಭಾರತೀಯ ಗೋಡಂಬಿ ಮತ್ತು ಕೋಕೋಗೆ ಮೀಸಲಾದ ಕಾರ್ಯಕ್ರಮದಲ್ಲಿ ದೇಶವನ್ನು ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು, ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಹಾಗೂ 2030ರ ವೇಳೆಗೆ ಅವುಗಳನ್ನು ಪ್ರೀಮಿಯಂ ಜಾಗತಿಕ ಬ್ರಾಂಡ್ಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ. ಭಾರತೀಯ ಶ್ರೀಗಂಧದ ಪರಿಸರ ವ್ಯವಸ್ಥೆಯನ್ನು ಮರುಸ್ಥಾಪಿಸಲು ಶ್ರೀಗಂಧದ ಕೃಷಿ ಮತ್ತು ಕಟಾವಿನ ನಂತರದ ಸಂಸ್ಕರಣೆಯನ್ನು ಉತ್ತೇಜಿಸಲು ಸರ್ಕಾರವು ರಾಜ್ಯಗಳೊಂದಿಗೆ ಸಹಭಾಗಿತ್ವ ಹೊಂದಲಿದೆ.
ಗುಡ್ಡಗಾಡು ಪ್ರದೇಶಗಳಿಗೆ ಮೀಸಲಾದ ಯೋಜನೆಯು ಹಳೆಯ ತೋಟಗಳ ಪುನರುಜ್ಜೀವನಕ್ಕೆ ಬೆಂಬಲ ನೀಡುತ್ತದೆ. ವಾಲ್ನಟ್ (ಅಕ್ರೋಟು), ಬಾದಾಮಿ ಮತ್ತು ಪೈನ್ ಮರದ ಬೀಜಗಳ ಕೃಷಿಯನ್ನು ವಿಸ್ತರಿಸುವುದರ ಜೊತೆಗೆ ಯುವಜನತೆಯ ತೊಡಗಿಸಿಕೊಳ್ಳುವ ಮೂಲಕ ಮೌಲ್ಯವರ್ಧನೆಗೆ ಕೇಂದ್ರೀಕರಿಸಿದೆ.







