ಬಜೆಟ್ ಮಧ್ಯಂತರ ಹಾದಿ: ದೆಹಲಿ, ಬಿಹಾರ ಮತದಾರರಿಗೆ ಆಮಿಷವೇ?

PC: x.com/FinFloww
ಹೊಸದಿಲ್ಲಿ: ಬಜೆಟ್ ಸಾಮಾನ್ಯವಾಗಿ ಎಷ್ಟು ಆರ್ಥಿಕ ಕ್ರಮವೋ ಅಷ್ಟೇ ಮಟ್ಟಿಗೆ ರಾಜಕೀಯ ತಂತ್ರವೂ ಹೌದು. ಇದಕ್ಕೆ ಸಣ್ಣ ಉದಾಹರಣೆ ನೋಡೋಣ.
ಬುಧವಾರ ದೆಹಲಿ ಮತದಾರರು ತಮ್ಮ ನೂತನ ಸರ್ಕಾರವನ್ನು ಆಯ್ಕೆ ಮಾಡಲಿದ್ದಾರೆ. ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇವರ ಓಲೈಕೆಗೆ ಬಜೆಟ್ ಕಸರತ್ತು ನಡೆಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ತಲಾ ಆದಾಯ ಆಧಾರದಲ್ಲಿ ಭಾರತದ ಅತ್ಯಂತ ಶ್ರೀಮಂತ ನಗರಿ ಎನಿಸಿದ ದೆಹಲಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಉದ್ಯೋಗಿಗಳು, ವ್ಯವಹಾರಸ್ಥರು ಸೇರಿದಂತೆ ಮಧ್ಯಮ ವರ್ಗ ದೊಡ್ಡ ಸಂಖ್ಯೆಯಲ್ಲಿದೆ. ಮಧ್ಯಮವರ್ಗಕ್ಕೆ ತೆರಿಗೆ ವಿನಾಯ್ತಿ ನೀಡಿರುವುದು ಈ ಓಲೈಕೆ ರಾಜಕೀಯಕ್ಕೆ ಸ್ಪಷ್ಟ ನಿದರ್ಶನ.
ಆಮ್ ಆದ್ಮಿ ಪಕ್ಷದ ಮತಬ್ಯಾಂಕ್ ಬಹುತೇಕ ಕಡಿಮೆ ಆದಾಯದ ವರ್ಗವಾಗಿದ್ದು, ಮಧ್ಯಮ ವರ್ಗ ಇನ್ನೂ ತೂಗುಯ್ಯಾಲೆಯಲ್ಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರನ್ನು ಕೇಸರಿ ಪಕ್ಷದತ್ತ ಓಲೈಸಲು ಮೋದಿ ಸರ್ಕಾರ ಪ್ರಯತ್ನ ನಡೆಸಿದೆ.
ಅಂತೆಯೇ ಬಿಹಾರದಲ್ಲಿ ಕೂಡಾ ಬಿಜೆಪಿಯ ಮಿತ್ರಪಕ್ಷವಾಗಿರುವ ಸಂಯುಕ್ತ ಜನತಾದಳ ನೇತೃತ್ವದ ಸರ್ಕಾರವನ್ನು ಮುಂದಿನ ಅವಧಿಗೆ ಉಳಿಸಿಕೊಳ್ಳಲು ಬಜೆಟ್ ನಲ್ಲಿ ಕಸರತ್ತು ನಡೆಸಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಮಖಾನಾ ಮಂಡಳಿ ಸ್ಥಾಪನೆ ಹಾಗೂ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆಯ ಸ್ಥಾಪನೆ, ಪಾಟ್ನಾ ಐಐಟಿ ವಿಸ್ತರಣೆ, ಬೌದ್ಧ ಸ್ಥಳ ಕೇಂದ್ರಿತ ಪ್ರವಾಸೋದ್ಯಮ ಅಭಿವೃದ್ಧಿ, ಪಶ್ಚಿಮ ಕೋಸಿ ಕಾಲುವೆಗೆ ನೆರವು ನೀಡಿರುವ ಹಲವು ಉದಾಹರಣೆಗಳು ಸಿಗುತ್ತವೆ. ಬಿಹಾರದ ಜಾನಪದ ಕಲಾಪ್ರಕಾರವಾದ ಮಧುಬಾನಿ ಚಿತ್ರಗಳನ್ನು ಹೊಂದಿದ ಸೀರೆಯಲ್ಲಿ ನಿರ್ಮಲಾ ಸೀತಾರಾಮನ್ ಕಾಣಿಸಿಕೊಂಡಿರುವುದು ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ.
ಈ ಎಲ್ಲ ಅಗ್ರಗಣ್ಯ ಯೋಜನೆಗಳು ಬಿಹಾರ ಬಜೆಟ್ ನಲ್ಲಿ ಕಳೆದ ವರ್ಷ ಪ್ರತಿಬಿಂಬಿತವಾಗಿತ್ತು. ಇದರ ರಾಜಕೀಯ ಸಂದೇಶ, ಆರ್ ಜೆಡಿ-ಕಾಂಗ್ರೆಸ್ ಮೈತ್ರಿಕೂಟದ ವಿರುದ್ಧ ಬಿಜೆಪಿ-ಜೆಡಿಯು ವಿರುದ್ಧ ಸೆಣೆಸಬೇಕಾಗಿದೆ ಎನ್ನುವುದು.







