ಇಂದು ಬಜೆಟ್ ಅಧಿವೇಶನ ಆರಂಭ: ಮನರೇಗಾ, ಎಸ್ಐಆರ್ ಸಮಸ್ಯೆ ಮೇಲೆ ವಿರೋಧ ಪಕ್ಷಗಳ ಚಿತ್ತ

ಸಂಸತ್ತಿನಲ್ಲಿ ಬಜೆಟ್ ಅಧಿವೇಶನಕ್ಕೂ ಮುನ್ನ ಮಂಗಳವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆ ( PC: ANI)
ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಬುಧವಾರ ಮಾತನಾಡುವ ಮೂಲಕ ಪ್ರಸಕ್ತ ವರ್ಷದ ಬಜೆಟ್ ಅಧಿವೇಶನಕ್ಕೆ ಚಾಲನೆ ನೀಡಲಿದ್ದಾರೆ.
ರಾಷ್ಟ್ರಪತಿಗಳ ಭಾಷಣ ಬಳಿಕ ಜನವರಿ 28 ರಿಂದ ಏಪ್ರಿಲ್ 2ರವರೆಗೆ ಅಧಿವೇಶನ ನಡೆಯಲಿದೆ. ಇದರ ನಡುವೆ ಮಧ್ಯಂತರ ವಿರಾಮ ಇರುತ್ತದೆ. ಮೊದಲ ಹಂತದ ಅಧಿವೇಶನ ಜನವರಿ 28ರಿಂದ ಫೆಬ್ರವರಿ 13ರವರೆಗೆ ಮತ್ತು ಎರಡನೇ ಹಂತ ಮಾರ್ಚ್ 9ರಿಂದ ಏಪ್ರಿಲ್ 2ರವರೆಗೆ ನಡೆಯಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಬಜೆಟ್ ಮಂಡಿಸುವರು. ಅಧಿವೇಶನದಲ್ಲಿ 30 ದಿನಗಳ ಕಲಾಪ ಸೇರಿರುತ್ತದೆ. ಅಧಿವೇಶನ ಆರಂಭದ ಮುನ್ನಾ ದಿನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ ನಡೆದಿದೆ.
ಅಧಿವೇಶನದ ವೇಳೆ ವಿರೋಧ ಪಕ್ಷಗಳು ಪ್ರಮಖವಾಗಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ ಹಾಗೂ ಮತಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಸಮಸ್ಯೆಗಳ ಬಗ್ಗೆ ಹಾಗೂ ಪರಿಸರ ಸಮಸ್ಯೆ ಬಗ್ಗೆ ಗಮನ ಸೆಳೆಯುವ ನಿರೀಕ್ಷೆ ಇದೆ.
ಕಾಂಗ್ರೆಸ್ ಪಕ್ಷದ ಸಂಸದೀಯ ಕಾರ್ಯತಂತ್ರ ಗುಂಪು ಮಂಗಳವಾರ ಕಾಂಗ್ರೆಸ್ ಸಂಸದೀಯ ಸಮಿತಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿವಾಸದಲ್ಲಿ ಸಭೆ ನಡೆಸಿ ಪ್ರಮುಖವಾಗಿ ವಿಬಿ ಜಿ ರಾಮ್ ಜಿ ಕಾಯ್ದೆ ಮತ್ತು ಎಸ್ಐಆರ್ ಬಗ್ಗೆ ಚರ್ಚೆ ನಡೆಸಿದೆ ಎಂದು ಕಾಂಗ್ರೆಸ್ ಸಂಸದ ಸೈಯದ್ ನಾಸೀರ್ ಹುಸೇನ್ ಹೇಳಿದ್ದಾರೆ.







