ಬಿಹಾರ| ಉದ್ಯಮಿ ಗೋಪಾಲ್ ಖೇಮ್ಕಾ ಅಂತ್ಯಕ್ರಿಯೆಯ ವೇಳೆ ಹೂವಿನ ಹಾರದೊಂದಿಗೆ ಆಗಮಿಸಿದ ಆರೋಪಿಯ ಬಂಧನ!

ಗೋಪಾಲ್ ಖೇಮ್ಕಾ | PTI
ಪಟ್ನಾ: ಇಡೀ ಬಿಹಾರ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಉದ್ಯಮಿ ಗೋಪಾಲ್ ಖೇಮ್ಕಾರ ಹತ್ಯೆಯ ಆರೋಪಿಗಳ ಪೈಕಿ ಓರ್ವ ಅವರ ಅಂತ್ಯಕ್ರಿಯೆಗೆ ಹೂವಿನ ಹಾರದೊಂದಿಗೆ ಆಗಮಿಸಿರುವ ಅಚ್ಚರಿಯ ಘಟನೆ ನಡೆದಿದ್ದು, ತಕ್ಷಣವೇ ಪೊಲೀಸರು ಆತನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಪಟ್ನಾದಲ್ಲಿ ನಡೆದ ಗೋಪಾಲ್ ಖೇಮ್ಕಾರ ಅಂತ್ಯಕ್ರಿಯೆಯ ವೇಳೆ, ಅವರ ಹತ್ಯೆ ಪ್ರಕರಣದಲ್ಲಿ ಆಪಾದಿತನಾಗಿರುವ ಓರ್ವ ಆರೋಪಿ ಹೂವಿನ ಹಾರದೊಂದಿಗೆ ಅಲ್ಲಿಗೆ ಆಗಮಿಸಿದ್ದ ಎಂದು ಮೂಲಗಳನ್ನು ಉಲ್ಲೇಖಿಸಿ CNN-News18 ಸುದ್ದಿ ಸಂಸ್ಥೆ ವರದಿ ಮಾಡಿದೆ.
ವರದಿಗಳ ಪ್ರಕಾರ, ಉದ್ಯಮಿ ಗೋಪಾಲ್ ಖೇಮ್ಕಾರನ್ನು ಹತ್ಯೆಗೈಯ್ಯುವುದಕ್ಕೂ ಮುನ್ನ, ಮೂವರು ಹಂತಕರು ದಾಲ್ದಲಿ ಪ್ರದೇಶದಲ್ಲಿನ ಟೀ ಮಳಿಗೆಯೊಂದರ ಬಳಿ ನೆರೆದಿದ್ದರು. ಅಲ್ಲಿ ಟೀ ಸೇವಿಸಿದ್ದ ದುಷ್ಕರ್ಮಿಗಳ ಪೈಕಿ ಓರ್ವ ಆರೋಪಿ ಗೋಪಾಲ್ ಖೇಮ್ಕಾರ ನಿವಾಸದ ಬಳಿಗೆ ತೆರಳಿ, ಅವರನ್ನು ಗುಂಡಿಟ್ಟು ಹತ್ಯೆಗೈದಿದ್ದ ಎನ್ನಲಾಗಿದೆ.
ಗೋಪಾಲ್ ಖೇಮ್ಕಾರ ಹತ್ಯೆಯ ಪ್ರಮುಖ ಆರೋಪಿಯು ಈ ಮುನ್ನ ಪಟ್ನಾದಲ್ಲಿ ನಡೆದಿದ್ದ ಆಟೋ ಚಾಲಕನ ಹತ್ಯೆ ಪ್ರಕರಣದಲ್ಲೂ ಭಾಗಿಯಾಗಿದ್ದ ಎಂದೂ ಹೇಳಲಾಗಿದೆ.
ಜುಲೈ 4ರ ರಾತ್ರಿ 11.40 ರ ವೇಳೆಗೆ ಗಾಂಧಿ ಮೈದಾನದಲ್ಲಿರುವ ತಮ್ಮ ನಿವಾಸದೆದುರು ಉದ್ಯಮಿ ಗೋಪಾಲ್ ಖೇಮ್ಕಾ ತಮ್ಮ ಕಾರಿನಿಂದ ಇಳಿಯಲು ಮುಂದಾಗುತ್ತಿದ್ದಂತೆಯೇ ಅಪರಿಚಿತ ಸಶಸ್ತ್ರಧಾರಿಯೊಬ್ಬ ಅವರ ಮೇಲೆ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದ.
ಜುಲೈ 6ರಂದು ಗುಲಾಬಿ ಘಾಟ್ ನಲ್ಲಿ ಗೋಪಾಲ್ ಖೇಮ್ಕಾರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡುವ ಮೂಲಕ, ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಭಾರಿ ಸಂಖ್ಯೆಯ ಉದ್ಯಮಿಗಳು ಸ್ಥಳದಲ್ಲಿ ನೆರೆದಿದ್ದರು ಎಂದು ವರದಿಯಾಗಿದೆ.







