ಉಪ ಚುನಾವಣೆ ಫಲಿತಾಂಶ: ಬಿಜೆಪಿ ಮತ್ತು ಇಂಡಿಯಾ ಮೈತ್ರಿ ಕೂಟಕ್ಕೆ ತಲಾ 3 ಸ್ಥಾನ: ಉತ್ತರ ಪ್ರದೇಶದಲ್ಲಿ ವಿರೋಧ ಪಕ್ಷಗಳ ಮುನ್ನಡೆ

ಸಾಂದರ್ಭಿಕ ಚಿತ್ರ.| Photo: PTI
ಹೊಸದಿಲ್ಲಿ: ದೇಶದ ವಿವಿಧ ರಾಜ್ಯಗಳಲ್ಲಿ ಮಂಗಳವಾರ ನಡೆದಿದ್ದ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ವಿರೋಧ ಪಕ್ಷಗಳ ಮೈತ್ರಿಕೂಟವಾದ INDIA ತಲಾ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಸಮಬಲ ಸಾಧಿಸಿವೆ. ತ್ರಿಪುರಾದ ಧನ್ಪುರ್ ಹಾಗೂ ಬೋಕ್ಸಾನಗರ್ ಹಾಗೂ ಉತ್ತರಾಖಂಡದ ಬಾಗೇಶ್ವರ್ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ವಿರೋಧ ಪಕ್ಷಗಳ ಮೈತ್ರಿಕೂಟವಾದ INDIA ಜಾರ್ಖಂಡ್ ನ ದುಮ್ರಿ, ಕೇರಳದ ಪುತ್ತುಪಲ್ಲಿ ಹಾಗೂ ಪಶ್ಚಿಮ ಬಂಗಾಳದ ಧುಗ್ಪುರಿ ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದೆ ಎಂದು ndtv.com ವರದಿ ಮಾಡಿದೆ.
INDIA ಮೈತ್ರಿಕೂಟದ ಅಂಗಪಕ್ಷವಾದ ಸಮಾಜವಾದಿ ಪಕ್ಷವು ಉತ್ತರ ಪ್ರದೇಶದ ಘೋಸಿ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ತ್ರಿಪುರಾದ ಬೋಕ್ಸಾನಗರ್ ಹಾಗೂ ಆದಿವಾಸಿಗಳ ಬಾಹುಳ್ಯವಿರುವ ಧನ್ಪುರ್ ವಿಧಾನಸಭಾ ಕ್ಷೇತ್ರಗಳಿಂದ ಕ್ರಮವಾಗಿ ಬಿಜೆಪಿ ಅಭ್ಯರ್ಥಿಗಳಾದ ತಫಜ್ಜಲ್ ಹೊಸೈನ್ ಮತ್ತು ಬಿಂದು ದೇಬ್ ನಾಥ್ ವಿಜಯಿಗಳಾಗಿದ್ದಾರೆ. ಉತ್ತರಾಖಂಡದ ಬಾಗೇಶ್ವರ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಬಸಂತ್ ಕುಮಾರ್, ಬಿಜೆಪಿ ಅಭ್ಯರ್ಥಿಯಾದ ಪಾರ್ವತಿ ದಾಸ್ ವಿರುದ್ಧ ಆರಂಭಿಕ ಮುನ್ನಡೆ ಗಳಿಸಿದ್ದರಾದರೂ, ನಂತರ ಹಿನ್ನಡೆ ಅನುಭವಿಸಿದರು.
ದಾಸ್ ಎದುರು ಕುಮಾರ್ ಸುಮಾರು 2,400 ಮತಗಳ ಅಂತರದಿಂದ ಪರಾಭವಗೊಂಡರು. ಎಪ್ರಿಲ್ ತಿಂಗಳಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದ ಸಂಪುಟ ಸಚಿವ ಚಂದನ್ ರಾಮ್ ದಾಸ್ ಮೃತಪಟ್ಟಿದ್ದರಿಂದ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಆಡಳಿತಾರೂಢ ಸಿಪಿಐ(ಎಂ) ಪಕ್ಷಕ್ಕೆ ಭಾರಿ ಹೊಡೆತ ನೀಡಿರುವ ಕಾಂಗ್ರೆಸ್-ಯುಡಿಎಫ್ ಮೈತ್ರಿಕೂಟದ ಅಭ್ಯರ್ಥಿ ಚಾಂಡಿ ಊಮನ್, ಕೇರಳದ ಪುತ್ತುಪಲ್ಲಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ 36,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮತ ಎಣಿಕೆಯ ಪ್ರಥಮ ಸುತ್ತಿನಲ್ಲೇ ಮುನ್ನಡೆ ಸಾಧಿಸಿದ ಕಾಂಗ್ರೆಸ್ ಪಕ್ಷದ ಹಿರಿಯ ನೇತಾರ ದಿ. ಊಮನ್ ಚಾಂಡಿ ಪುತ್ರರಾದ ಚಾಂಡಿ ಊಮನ್, ಮತ ಎಣಿಕೆಯ ಮುಕ್ತಾಯದವರೆಗೂ ಆ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಜಾರ್ಖಂಡ್ ನ ಗಿರಿದಿ ಜಿಲ್ಲೆಯ ದುಮ್ರಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಝಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ)ದ ಅಭ್ಯರ್ಥಿ ಬೇಬಿ ದೇವಿ, ಆಲ್ ಝಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್(ಎಜೆಎಸ್ಯು) ಪಕ್ಷದ ಅಭ್ಯರ್ಥಿಯಾಗಿದ್ದ ಯಶೋದಾ ದೇವಿಯನ್ನು 17,000ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು.
ಉತ್ತರ ಪ್ರದೇಶದ ಘೋಸಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಹಾಗೂ ಜನಪ್ರಿಯ ಹಿಂದುಳಿದ ವರ್ಗಗಳ ನಾಯಕ ದಾರಾ ಸಿಂಗ್ ಚೌಹಾಣ್ ಸಮಾಜವಾದಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಯನ್ನು ಮರು ಸೇರ್ಪಡೆಯಾಗಿದ್ದರಿಂದ ಘೋಸಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಇತ್ತೀಚಿನ ವರದಿಗಳ ಪ್ರಕಾರ, ಈ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾದ ಸುಧಾಕರ್ ಸಿಂಗ್ 35,000ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ, INDIA ಮೈತ್ರಿಕೂಟದ ಎರಡು ಅಂಗಪಕ್ಷಗಳಾದ ಕಾಂಗ್ರೆಸ್ ಹಾಗೂ ಸಿಪಿಐ(ಎಂ) ಒಟ್ಟಾಗಿ INDIA ಮೈತ್ರಿಕೂಟದ ಮತ್ತೊಂದು ಅಂಗಪಕ್ಷವಾದ ತೃಣಮೂಲ ಕಾಂಗ್ರೆಸ್ ವಿರುದ್ಧ ಬಿಜೆಪಿ ಕ್ಷೇತ್ರವಾದ ದುಗ್ಪುರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದವು.
ಆದರೆ, ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನಿರ್ಮಲ ಚಂದ್ರ ರಾಯ್ ಗೆಲುವು ಸಾಧಿಸುವ ಮೂಲಕ, ಆ ಕ್ಷೇತ್ರದ ಮೇಲೆ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕಿರುವ ಹಿಡಿತವನ್ನು ನಿರೂಪಿಸಿದರು. ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಪೈಕಿ ಧನ್ಪುರ್, ಧುಗ್ಪುರಿ ಹಾಗೂ ಬಾಗೇಶ್ವರ್ ಕ್ಷೇತ್ರವನ್ನು ಬಿಜೆಪಿ ಪ್ರತಿನಿಧಿಸುತ್ತಿತ್ತು. ಉತ್ತರ ಪ್ರದೇಶದ ಘೋಸಿ ಕ್ಷೇತ್ರ ಹಾಗೂ ಝಾರ್ಖಂಡ್ ನ ದುಮ್ರಿ ಕ್ಷೇತ್ರವನ್ನು ಕ್ರಮವಾಗಿ ಸಮಾಜವಾದಿ ಪಕ್ಷ ಹಾಗೂ ಝಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷಗಳು ಪ್ರತಿನಿಧಿಸುತ್ತಿದ್ದವು. ತ್ರಿಪುರಾದ ಬೋಕ್ಸಾನಗರ್ ಹಾಗೂ ಕೇರಳದ ಪುತ್ತುಪಲ್ಲಿ ಕ್ಷೇತ್ರವನ್ನು ಕ್ರಮವಾಗಿ ಸಿಪಿಐ(ಎಂ) ಹಾಗೂ ಕಾಂಗ್ರೆಸ್ ಪಕ್ಷಗಳು ಪ್ರತಿನಿಧಿಸುತ್ತಿದ್ದವು.







