ಉಪಚುನಾವಣೆ: ತಲಾ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ಜಯ

ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ, ನ. 13: ದೇಶಾದ್ಯಂತ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಎರಡು ಕ್ಷೇತ್ರಗಳಲ್ಲಿ ಜಯ ಗಳಿಸಿವೆ. ಉಳಿದಂತೆ ಆಮ್ ಆದ್ಮಿ ಪಕ್ಷ, ಪಿಡಿಪಿ, ಜಾರ್ಖಂಡ್ ಮುಕ್ತಿ ಮೋರ್ಚ ಮತ್ತು ಮಿರೆ ನ್ಯಾಶನಲ್ ಫ್ರಂಟ್ ತಲಾ ಒಂದು ಸ್ಥಾನ ಗಳಿಸಿವೆ.
ಉಪಚುನಾವಣೆಯ ಫಲಿತಾಂಶ ಶುಕ್ರವಾರ ಹೊರಬಿದ್ದಿದೆ.
ಕಾಂಗ್ರೆಸ್ ರಾಜಸ್ಥಾನದ ಅಂತ ಮತ್ತು ತೆಲಂಗಾಣದ ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಅದೇ ವೇಳೆ, ಬಿಜೆಪಿಯು ಜಮ್ಮು ಮತ್ತು ಕಾಶ್ಮೀರದ ನಗ್ರೋಟ ಮತ್ತು ಒಡಿಶಾದ ನುವಾಪಾಡ ಕ್ಷೇತ್ರಗಳನ್ನು ಗೆದ್ದಿದೆ. ಉಳಿದಂತೆ, ಪಂಜಾಬ್ ನ ತರಣ್ ತಾರಣ್ ಕ್ಷೇತ್ರವನ್ನು ಆಮ್ ಆದ್ಮಿ ಪಕ್ಷ, ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ಕ್ಷೇತ್ರವನ್ನು ಪಿಡಿಪಿ, ಜಾರ್ಖಂಡ್ ನ ಘಾಟ್ಸಿಲ ಕ್ಷೇತ್ರವನ್ನು ಜಾರ್ಖಂಡ್ ಮುಕ್ತಿ ಮೋರ್ಚ, ಮಿಜೋರಾಮ್ ನ ಡಂಪ ಕ್ಷೇತ್ರವನ್ನು ಮಿರೆ ನ್ಯಾಶನಲ್ ಫ್ರಂಟ್ ಗೆದ್ದಿವೆ.
►ಜಮ್ಮು ಮತ್ತು ಕಾಶ್ಮೀರ
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ, ಬದ್ಗಾಮ್ ನಲ್ಲಿ ಪಿಡಿಪಿ ಗೆದ್ದರೆ, ನಗ್ರೋತ ಕ್ಷೇತವನ್ನು ಬಿಜೆಪಿ ಉಳಿಸಿಕೊಂಡಿದೆ.
ಬದ್ಗಾಮ್ ನಲ್ಲಿ, ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ನೇತೃತ್ವದ ಆಡಳಿತಾರೂಢ ನ್ಯಾಶನಲ್ ಕಾನ್ಫರೆನ್ಸ್ ಹಿನ್ನಡೆ ಕಂಡಿದೆ. ಪ್ರತಿಪಕ್ಷ ಪಿಡಿಪಿ ಈ ಕ್ಷೇತ್ರವನ್ನು ಆಡಳಿತಾರೂಢ ಪಕ್ಷದಿಂದ ಕಸಿದುಕೊಂಡಿದೆ. ಬದ್ಗಾಮ್ ಕ್ಷೇತ್ರದಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಚುನಾವಣೆ ಸೋತಿರುವುದು ಇದೇ ಮೊದಲ ಬಾರಿಯಾಗಿದೆ.
ಪಿಡಿಪಿಯ ಅಗಾ ಮುಂತಾಝಿರ್, ಉಮರ್ ಅಬ್ದುಲ್ಲಾ ಸರಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯ ನೆರವನ್ನು ಪಡೆದು ನ್ಯಾಶನಲ್ ಕಾನ್ಫರೆನ್ಸ್ನ ಅಗಾ ಮಹ್ಮೂದ್ ವಿರುದ್ಧ 4,478 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಅಗಾ ಮುಂತಾಝಿರ್ 21,576 ಮತಗಳನ್ನು ಪಡೆದರೆ, ಅಗಾ ಮಹ್ಮೂದ್ 17,098 ಮತಗಳನ್ನು ಗಳಿಸಿದರು.
ನಗ್ರೋಟ ಕ್ಷೇತ್ರವನ್ನು ಪ್ರತಿಪಕ್ಷ ಬಿಜೆಪಿಯು ಉಳಿಸಿಕೊಂಡಿದೆ. ಬಿಜೆಪಿಯ ದೇವಯಾನಿ ರಾಣಾ ಜಮ್ಮು ಮತ್ತು ಕಾಶ್ಮೀರ ನ್ಯಾಶನಲ್ ಪ್ಯಾಂತರ್ಸ್ ಪಾರ್ಟಿ ಅಭ್ಯರ್ಥಿ ಹರ್ಷದೇವ್ ಸಿಂಗ್ರನ್ನು 24,647 ಮತಗಳ ಅಂತರದಿಂದ ಸೋಲಿಸಿದರು.
ದೇವಯಾನಿ 42,350 ಮತಗಳನ್ನು ಪಡೆದರೆ, ಹರ್ಷದೇವ್ 17,703 ಮತಗಳನ್ನು ಗಳಿಸಿದರು.
►ತೆಲಂಗಾಣ
ತೆಲಂಗಾಣ ರಾಜ್ಯದ ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷದ ನವೀನ್ ಯಾದವ್ ವಿ. ಭಾರತ್ ರಾಷ್ಟ್ರ ಸಮಿತಿಯ ಮಗಂಟಿ ಸುನೀತಾ ಗೋಪಿನಾಥ್ ರನ್ನು 24,729 ಮತಗಳ ಅಂತರದಿಂದ ಸೋಲಿಸಿದ್ದಾರೆ.
ನವೀನ್ ಯಾದವ್ 98,988 ಮತಗಳನ್ನು ಗಳಿಸಿದರೆ, ಸುನೀತಾ 74,259 ಮತಗಳನ್ನು ಪಡೆದರು. ಬಿಜೆಪಿಯ ದೀಪಕ್ ರೆಡ್ಡಿ ಲಂಕಾಲ 17,061 ಮತಗಳನ್ನು ಪಡೆದು ತೃತೀಯ ಸ್ಥಾನಿಯಾದರು.
►ರಾಜಸ್ಥಾನ
ರಾಜಸ್ಥಾನದ ಅಂತ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ, ಕಾಂಗ್ರೆಸ್ ಜಯಶಾಲಿಯಾಗಿ ಹೊರಹೊಮ್ಮಿದೆ.
ಕಾಂಗ್ರೆಸ್ನ ಪ್ರಮೋದ್ ಜೈನ್ ಭಯ್ಯಾ ಬಿಜೆಪಿಯ ಮೊರ್ಪಾಲ್ ಸುಮನ್ ರನ್ನು 15,612 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಪ್ರಮೋದ್ 69,571 ಮತಗಳನ್ನು ಪಡೆದರೆ, ಮೊರ್ಪಾಲ್ ಸುಮನ್ 53,959 ಮತಗಳನ್ನು ಗಳಿಸಿದರು.
►ಪಂಜಾಬ್
ಪಂಜಾಬ್ ನ ತರಣ್ ತಾರಣ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ, ಆಮ್ ಆದ್ಮಿ ಪಕ್ಷ (ಆಪ್)ವು ಜಯ ಗಳಿಸಿದೆ.
ಆಪ್ ಅಭ್ಯರ್ಥಿ ಹರ್ಮೀತ್ ಸಿಂಗ್ ಸಂದು ಶಿರೋಮಣಿ ಅಕಾಲಿ ದಳದ ಅಭ್ಯರ್ಥಿ ಸುಖ್ವಿಂದರ್ ಕೌರ್ರನ್ನು 12,091 ಮತಗಳ ಅಂತರದಿಂದ ಪರಾಭವಗೊಳಿಸಿದರು.
ಹರ್ಮೀತ್ ಸಿಂಗ್ 42,649 ಮತಗಳನ್ನು ಗಳಿಸಿದರೆ, ಸುಖ್ವಿಂದರ್ ಕೌರ್ 30,558 ಮತಗಳನ್ನು ಪಡೆದರು.
ಕಾಂಗ್ರೆಸ್ನ ಕರಣ್ಬೀರ್ ಸಿಂಗ್ 15,078 ಮತಗಳನ್ನು ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ.
►ಒಡಿಶಾ
ಒಡಿಶಾದ ನುವಾಪಾಡ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ, ಬಿಜೆಪಿ ಜಯ ಗಳಿಸಿದೆ.
ಬಿಜೆಪಿಯ ಜಯ ದೋಲಾಕಿಯ ಕಾಂಗ್ರೆಸ್ನ ಘಾಸಿ ರಾಮ್ ಮಝಿ ಅವರನ್ನು 83,748 ಮತಗಳ ಭರ್ಜರಿ ಅಂತರದಿಂದ ಸೋಲಿಸಿದರು.
ಬಿಜೆಪಿ ಅಭ್ಯರ್ಥಿ 1,23,869 ಮತಗಳನ್ನು ಬಾಚಿಕೊಂಡರೆ, ಕಾಂಗ್ರೆಸ್ ಅಭ್ಯರ್ಥಿ 40,121 ಮತಗಳನ್ನು ಪಡೆದರು. ಮೂರನೇ ಸ್ಥಾನದಲ್ಲಿರುವ ಬಿಜು ಜನತಾ ದಳ (ಬಿಜೆಡಿ) ಅಭ್ಯರ್ಥಿ ಸ್ನೇಹಾಂಗಿನಿ ಛೂರಿಯ 38,408 ಮತಗಳನ್ನು ಗಳಿಸಿದರು.
ಬಿಜೆಡಿ ಶಾಸಕ ರಾಜೇಂದ್ರ ದೋಲಾಕಿಯ ಸೆಪ್ಟಂಬರ್ 8ರಂದು ನಿಧನರಾದ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದೆ.
►ಮಿಜೋರಾಮ್
ಮಿರೆರಾಮ್ನ ಡಂಪ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಮಿರೆ ನ್ಯಾಶನಲ್ ಫ್ರಂಟ್ ಜಯ ಗಳಿಸಿದೆ.
ಮಿರೆ ನ್ಯಾಶನಲ್ ಫ್ರಂಟ್ನ ಡಾ. ಆರ್. ಲಾಲ್ತಂಗ್ಲಿಯಾನ ರೊರಾಮ್ ಪೀಪಲ್ಸ್ ಮೂವ್ಮೆಂಟ್ನ ವನ್ಲಾಲ್ಸೈಲೋವ ಅವರನ್ನು ಕೇವಲ 562 ಮತಗಳ ಅಂತರದಿಂದ ಸೋಲಿಸಿದರು.
ಡಾ. ಲಾಲ್ತಂಗ್ಲಿಯಾನ 6981 ಮತಗಳನ್ನು ಪಡೆದರೆ, ಅವರ ಸಮೀಪದ ಎದುರಾಳಿ 6,419 ಮತಗಳನ್ನು ಗಳಿಸಿದರು. ಮೂರನೇ ಸ್ಥಾನದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಜಾನ್ ರೊಟ್ಲುವಂಗ್ಲಿಯಾನ 2,394 ಮತಗಳನ್ನು ಪಡೆದರು.
►ಜಾರ್ಖಂಡ್
ಜಾರ್ಖಂಡ್ ನ ಘಾಟ್ಸಿಲ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ, ಜಾರ್ಖಂಡ್ ಮುಕ್ತಿ ಮೋರ್ಚದ ಸೋಮೇಶ್ ಚಂದ್ರ ಸೊರೇನ್ ಬಿಜೆಪಿಯ ಬಾಬುಲಾಲ್ ಸೊರೇನ್ರನ್ನು 38,601 ಮತಗಳಿಂದ ಸೋಲಿಸಿದ್ದಾರೆ.
ಸೋಮೇಶ್ 1,04,936 ಮತಗಳನ್ನು ಪಡೆದರೆ, ಬಾಬುಲಾಲ್ 66,335 ಮತಗಳನ್ನು ಗಳಿಸಿದರು.
ಜೆಎಮ್ಎಮ್ ಶಾಸಕ ರಾಮದಾಸ್ ಸೊರೇನ್ ನಿಧನದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿದೆ. ವಿಜಯೀ ಅಭ್ಯರ್ಥಿ ಸೋಮೇಶ್, ದಿವಂಗತ ಶಾಸಕರ ಮಗನಾಗಿದ್ದಾರೆ.







