ಉದ್ಯೋಗ ಖಾತರಿ ಸೇರಿ ಹಲವು ಮಸೂದೆಗಳಿಗೆ ಕೇಂದ್ರ ಸಂಪುಟ ಅಸ್ತು

PC | timesofindia
ಹೊಸದಿಲ್ಲಿ: ಉದ್ಯೋಗ ಖಾತರಿ ಯೋಜನೆಯಡಿ ಲಭ್ಯವಾಗುವ ಕೆಲಸದ ದಿನಗಳನ್ನು ಹೆಚ್ಚಿಸುವುದು ಸೇರಿದಂತೆ ಸಾಮಾಜಿಕ ಸುರಕ್ಷೆಯನ್ನು ಸುಧಾರಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ. ಜತೆಗೆ ಅಣುವಿದ್ಯುತ್ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸುವುದು, ವಿಮಾ ಕ್ಷೇತ್ರದಲ್ಲಿ ಶೇ.100ರ ವಿದೇಶಿ ಹೂಡಿಕೆಗೆ ಅವಕಾಶ ನೀಡುವ ಮೂಲಕ ಮಾರುಕಟ್ಟೆಗಳನ್ನು ಮತ್ತು ಹಣಕಾಸು ವಲಯವನ್ನು ಬಲಪಡಿಸುವ ಮಸೂದೆಗೂ ಒಪ್ಪಿಗೆ ನೀಡಲಾಗಿದೆ.
ಹಾಲಿ ಇರುವ ನರೇಗಾ ಯೋಜನೆಯ ಬದಲಾಗಿ ಪೂಜ್ಯ ಬಾಪು ಗ್ರಾಮೀಣ ರೋಜ್ಗಾರ್ ಖಾತರಿ ಮಸೂದೆಯನ್ನು ಮಂಡಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಈ ಯೋಜನೆಯಡಿ ಹಾಲಿ ಇರುವ 100 ದಿನಗಳ ಬದಲಾಗಿ ಗ್ರಾಮೀಣ ಬಡವರಿಗೆ 125 ದಿನಗಳ ಉದ್ಯೋಗ ಖಾತರಿ ನೀಡಲಾಗುತ್ತದೆ ಹಾಗೂ ಇದಕ್ಕೆ ದೊಡ್ಡ ಅನುದಾನ ಅಗತ್ಯವಾಗುತ್ತದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಈ ನಡೆಗೆ ಸರ್ಕಾರ ಉದ್ದೇಶಿಸಿದ್ದು, ಉದ್ಯೋಗ ಖಾತರಿ ಯೋಜನೆಯ ಹೆಗ್ಗಳಿಕೆ ಪಡೆಯುವ ಯುಪಿಎ ಪ್ರಯತ್ನವನ್ನು ವಿಫಲಗೊಳಿಸುವ ಕ್ರಮ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಚಳಿಗಾಲದ ಅಧಿವೇಶನ ಮುಕ್ತಾಯಕ್ಕೆ ಕೇವಲ ಒಂದು ವಾರ ಬಾಕಿ ಇರುವ ಹಿನ್ನೆಲೆಯಲ್ಲಿ, ಅಣುವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡುವ 'ಭಾರತ ಪರಿವರ್ತನೆಗಾಗಿ ಅಣುವಿದ್ಯುತ್ ಮಸೂದೆ'ಯನ್ನು ಶೀಘ್ರದಲ್ಲೇ ಮಂಡಿಸಲು ಸರ್ಕಾರ ಉದ್ದೇಶಿಸಿದೆ ಎಂದು ತಿಳಿದು ಬಂದಿದೆ.
ವಿಮಾ ಕ್ಷೇತ್ರದಲ್ಲಿ ಶೇ.100ರಷ್ಟು ನೇರ ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನೀಡುವ ಪ್ರಸ್ತಾವಕ್ಕೆ ಕೂಡಾ ಸರ್ಕಾರ ಸಂಸತ್ತಿನ ಒಪ್ಪಿಗೆ ಬಯಸಿದೆ. ಇದರ ಜತೆಗೆ ವಿತರಣಾ ಜಾಲದಲ್ಲಿ ಸುಧಾರಣೆ ತರುವ ಮೂಲಕ ಹೆಚ್ಚಿನ ಕುಟುಂಬಗಳು ಮತ್ತು ಜನರು ಜೀವವಿಮೆಯನ್ನು ಮೀರಿ ಆರೋಗ್ಯ ಮತ್ತು ಆಸ್ತಿಯ ವಿಚಾರದಲ್ಲಿ ಅಪಾಯ ಸಾಧ್ಯತೆಗಳಿಗೆ ಸುರಕ್ಷೆ ಒದಗಿಸಲೂ ಉದ್ದೇಶಿಸಲಾಗಿದೆ. ಈ ಪ್ರಸ್ತಾವಿತ ಕಾನೂನುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಮೂಲಗಳು ಹೇಳಿವೆ. ಮುಂದಿನ ವಾರ ಇವುಗಳನ್ನು ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಲಾಗಿದೆ.







