ಮಹಾರಾಷ್ಟ್ರ | ವಿವಾಹ ಪ್ರಸ್ತಾಪವನ್ನು ಚರ್ಚಿಸುವ ಸೋಗಿನಲ್ಲಿ ಯುವಕನನ್ನು ಮನೆಗೆ ಆಹ್ವಾನಿಸಿ ಹತ್ಯೆ

PC : NDTV
ಮುಂಬೈ: ಯುವತಿಯ ಕುಟುಂಬದ ಸದಸ್ಯರು ವಿವಾಹ ಪ್ರಸ್ತಾಪವನ್ನು ಚರ್ಚಿಸುವ ಸೋಗಿನಲ್ಲಿ ಯುವಕನೊಬ್ಬನನ್ನು ಮನೆಗೆ ಆಹ್ವಾನಿಸಿ, ಬಳಿಕ ಆತನನ್ನು ಥಳಿಸಿ ಹತ್ಯೆಗೈದಿರುವ ಘಟನೆ ನಡೆದಿದೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.
ಮೃತ ಯುವಕನನ್ನು ರಾಮೇಶ್ವನರ್ ಘೇಂಗಾಟ್ (26) ಎಂದು ಗುರುತಿಸಲಾಗಿದೆ.
ಈ ಘಟನೆ ಪುಣೆ ಬಳಿಯ ಪಿಂಪ್ರಿ ಚಿಂಚ್ವಾಡ್ ನಲ್ಲಿನ ಸಾಂಗ್ವಿ ಪ್ರದೇಶದಲ್ಲಿ ಜುಲೈ 22ರಂದು ನಡೆದಿದೆ ಎಂದು ವರದಿಯಾಗಿದೆ.
ಈ ಸಂಬಂಧ ಯುವತಿಯ ತಂದೆ ಸೇರಿದಂತೆ ಒಂಭತ್ತು ಮಂದಿಯನ್ನು ಬಂಧಿಸಲಾಗಿದ್ದು, ಉಳಿದಿಬ್ಬರು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲ ಬಂಧಿತ ಆರೋಪಿಗಳ ವಿರುದ್ಧ ಹತ್ಯೆ ಪ್ರಕರಣವನ್ನು ದಾಖಲಿಸಲಾಗಿದೆ.
ಮೃತ ಯುವಕನು ತನ್ನ ಸಂಬಂಧಿ ಯುವತಿಯೊಬ್ಬಳೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ. ಆದರೆ, ಮೃತ ಯುವಕನ ವಿರುದ್ಧ ಅತ್ಯಾಚಾರ ಆರೋಪ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳಿದ್ದುದರಿಂದ, ಯುವತಿಯ ಕುಟುಂಬದ ಸದಸ್ಯರು ಅವರಿಬ್ಬರ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಮೃತ ಯುವಕನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದವು.
ಆದರೆ, ಇಬ್ಬರೂ ವಿವಾಹವಾಗುವುದಾಗಿ ಪಟ್ಟು ಹಿಡಿದಿದ್ದುದರಿಂದ, ವಿವಾಹ ಪ್ರಸ್ತಾಪದ ಕುರಿತು ಚರ್ಚಿಸುವ ಸೋಗಿನಲ್ಲಿ ಯುವತಿಯ ಕುಟುಂಬದ ಸದಸ್ಯರು ಮೃತ ಯುವಕನನ್ನು ಮನೆಗೆ ಕರೆಸಿಕೊಂಡಿದ್ದಾರೆ. ಈ ಆಹ್ವಾನದ ಮೇರೆಗೆ ಮೃತ ಯುವಕ ತನ್ನ ಪೋಷಕರೊಂದಿಗೆ ಯುವತಿಯ ಮನೆಗೆ ತೆರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಅಲ್ಲಿಗೆ ಮೃತ ಯುವಕನ ಕುಟುಂಬದವರು ತೆರಳಿದ ನಂತರ, ಎರಡೂ ಕುಟುಂಬಗಳ ನಡುವೆ ಜಗಳ ಪ್ರಾರಂಭವಾಗಿದೆ. ಮೃತ ಯುವಕ ರಾಮೇಶ್ವರ್ ನನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿರುವ ಯುವತಿಯ ಕುಟುಂಬದ ಸದಸ್ಯರು, ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಮೇಶ್ವರ್ ನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.
ಈ ಕುರಿತು ಮೃತ ಯುವಕನ ಪೋಷಕರು ನೀಡಿದ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







