ಭಾರತ-ಕೆನಡಾ ರಾಜತಾಂತ್ರಿಕ ಸಂಬಂಧದಲ್ಲಿ ಸುಧಾರಣೆ | ಕೆನಡಾಗೆ ಹೈಕಮಿಷನರ್ ನೇಮಕ

ದಿನೇಶ್ ಕೆ. ಪಟ್ನಾಯಕ್ | pc: indiatoday.in
ಹೊಸ ದಿಲ್ಲಿ: ಭಾರತದ ಮುಂದಿನ ಕೆನಡಾ ರಾಯಭಾರಿಯನ್ನಾಗಿ 1990ನೇ ಬ್ಯಾಚ್ ನ ಭಾರತೀಯ ವಿದೇಶಾಂಗ ಸೇವೆಗಳ ಅಧಿಕಾರಿ ದಿನೇಶ್ ಕೆ. ಪಟ್ನಾಯಕ್ ಅವರನ್ನು ಭಾರತ ಸರಕಾರ ನೇಮಿಸಿದೆ.
ದಿನೇಶ್ ಪಟ್ನಾಯಕ್ ಅವರು ಸದ್ಯ ಸ್ಪೇನ್ ಗೆ ರಾಯಭಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಸೂಚನೆ ಪ್ರಕಾರ, ಪಟ್ನಾಯಕ್ ಅವರು ಶೀಘ್ರದಲ್ಲೇ ಕೆನಡಾದಲ್ಲಿನ ಭಾರತೀಯ ಹೈಕಮಿಷನರ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಕೆನಡಾದಲ್ಲಿನ ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಬೆನ್ನಿಗೇ ಅಂದಿನ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಭಾರತದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಹಿನ್ನೆಲೆಯಲ್ಲಿ ಭಾರತವು ಅಕ್ಟೋಬರ್ 2024ರಲ್ಲಿ ಕೆನಡಾದಿಂದ ಭಾರತೀಯ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿತ್ತು. ಕೆನಡಾ ನೆಲದಲ್ಲಿ ನಡೆದ ನಿಜ್ಜಾರ್ ಹತ್ಯೆಯ ಹಿಂದೆ ಭಾರತದ ಪಾತ್ರವಿದೆ ಎಂದು ಕೆನಡಾ ಪ್ರಧಾನಿ ಆಪಾದಿಸಿದ್ದರಿಂದ, ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧಗಳು ತೀರಾ ಹದಗೆಟ್ಟಿದ್ದವು.
ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಹಿಂದೆ ಭಾರತದ ಅಧಿಕಾರಿಗಳ ಹಿತಾಸಕ್ತಿ ಅಡಗಿತ್ತು ಎಂದು ಕೆನಡಾ ಸರಕಾರದ ತನಿಖೆಯು ಆರೋಪಿಸಿದ್ದರಿಂದ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಂಡಿತ್ತು. ಇದಕ್ಕೆ ಪ್ರತಿಯಾಗಿ ಭಾರತವು ಕೆನಡಾದಿಂದ ಹೈಕಮಿಷನರ್ ಅನ್ನು ಹಿಂಪಡೆಯುವ ನಿರ್ಧಾರ ಪ್ರಕಟಿಸಿತ್ತು.





