ಕೆನಡಾ : ಭಾರತೀಯ ರಾಯಭಾರ ಕಚೇರಿಗಳೆದುರು ಪ್ರತಿಭಟಿಸುವಂತೆ ಬೆಂಬಲಿಗರಿಗೆ ಖಾಲಿಸ್ತಾನಿ ಗುಂಪು ಕರೆ

ಸಾಂದರ್ಭಿಕ ಚಿತ್ರ.| Photo: ANI
ಒಟ್ಟಾವ: ಬ್ರಿಟಿಷ್ ಕೊಲಂಬಿಯಾದಲ್ಲಿ ಖಾಲಿಸ್ತಾನಿ ಉಗ್ರನ ಹತ್ಯೆಯ ಹಿಂದೆ ದಿಲ್ಲಿಯ ಬಲವಾದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ಒಂದು ವಾರದ ನಂತರ, ಕೆನಡಾದ ಮುಖ್ಯ ನಗರಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ಎದುರು ಪ್ರತಿಭಟಿಸುವಂತೆ ಖಾಲಿಸ್ತಾನಿ ಗುಂಪೊಂದು ತನ್ನ ಸದಸ್ಯರಿಗೆ ಕರೆ ನೀಡಿದೆ ಎಂದು indiatoday.in ವರದಿ ಮಾಡಿದೆ.
ಜೂನ್ 18ರಂದು ಅತಿ ಹೆಚ್ಚು ಸಿಖ್ ಸಮುದಾಯದ ಸಂಖ್ಯೆ ಹೊಂದಿರುವ ಸರ್ರೆಯ ವ್ಯಾಂಕೋವರ್ ಸಬ್ ಅರ್ಬ್ ನ ಗುರುದ್ವಾರದ ಹೊರಗೆ ನಡೆದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತೀಯ ಸರ್ಕಾರದ ಏಜೆಂಟ್ ಗಳ ಕೈವಾಡವಿರುವುದಕ್ಕೆ ತನ್ನ ಬಳಿ ಬಲವಾದ ಸಾಕ್ಷ್ಯವಿದೆ ಎಂದು ಕಳೆದ ವಾರ ಟ್ರುಡೊ ಆರೋಪಿಸಿದ್ದರು.
ಈ ಆರೋಪವನ್ನು ತಕ್ಷಣವೇ ಅಲ್ಲಗಳೆದಿದ್ದ ಭಾರತವು, ಆ ಹತ್ಯೆಯಲ್ಲಿ ತನ್ನ ಪಾತ್ರವಿದೆ ಎಂದು ವ್ಯಾಖ್ಯಾನಿಸುವುದು ಅಸಂಬದ್ಧ ಎಂದು ಟೀಕಿಸಿತ್ತು. ಈ ಆರೋಪಗಳಿಂದ ಉಭಯ ದೇಶಗಳ ನಡುವಿನ ಬಿಕ್ಕಟ್ಟು ಸ್ಫೋಟಗೊಂಡು, ಎರಡೂ ದೇಶಗಳು ರಾಜತಾಂತ್ರಿಕರನ್ನು ಉಚ್ಚಾಟಿಸಿದ್ದವು. ಇದರ ಬೆನ್ನಿಗೇ, ಕೆನಡಾ ಪ್ರಜೆಗಳಿಗೆ ಹೊಸ ದಿಲ್ಲಿಯು ವೀಸಾ ಸೇವೆಯನ್ನು ಅಮಾನತುಗೊಳಿಸಿತ್ತು.
ಕೆನಡಾದಲ್ಲಿನ ಸಿಖ್ ಫಾರ್ ಜಸ್ಟೀಸ್ ಸಂಸ್ಥೆಯ ನಿರ್ದೇಶಕರಾಗಿರುವ ಜಿತೇಂದರ್ ಸಿಂಗ್ ಗ್ರೇವಲ್, ತಮ್ಮ ಸಂಸ್ಥೆಯು ಟೊರೊಂಟೊದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಹಾಗೂ ಕಾನ್ಸುಲೇಟ್ ಕಚೇರಿಗಳೆದುರು ಧರಣಿ ನಡೆಸಲಿದೆ. ನಿಜ್ಜರ್ ಹತ್ಯೆಯ ಕುರಿತು ಒಟ್ಟಾವ ಹಾಗೂ ವ್ಯಾಂಕೋವರ್ ನಲ್ಲಿ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಲಾಗುವುದು ಎಂದು ರವಿವಾರ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
“ಭಾರತೀಯ ರಾಯಭಾರಿಗಳನ್ನು ಉಚ್ಚಾಟಿಸುವಂತೆ ನಾವು ಕೆನಡಾ ಸರ್ಕಾರವನ್ನು ಆಗ್ರಹಿಸುತ್ತೇವೆ” ಎಂದು ಗ್ರೇವಲ್ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಲು ಒಟ್ಟಾವ ಮತ್ತು ಟೊರೊಂಟೊಗಳಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿನ ಪ್ರತಿನಿಧಿಗಳು ತಕ್ಷಣವೇ ದೊರೆಯಲಿಲ್ಲ.
ಕೆನಡಾದಲ್ಲಿ ಸುಮಾರು 77,00,000 ಮಂದಿ ಸಿಖ್ಖರಿದ್ದು, ಭಾರತದ ಹೊರಗಿರುವ ಅತಿ ದೊಡ್ಡ ಸಂಖ್ಯೆಯ ಸಿಖ್ ಸಮುದಾಯ ಇಲ್ಲಿದೆ. ಈ ದೇಶವು ಹಲವಾರು ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದು, ಇದರಿಂದ ಹೊಸ ದಿಲ್ಲಿ ಹಲವು ಬಾರಿ ಕಿರಿಕಿರಿ ಅನುಭವಿಸಿದೆ.
140 ಕೋಟಿ ಜನಸಂಖ್ಯೆಯ ಪೈಕಿ ಸಿಖ್ ಸಮುದಾಯದ ಜನಸಂಖ್ಯೆ ಕೇವಲ ಶೇ. 2ರಷ್ಟಿದ್ದರೂ, ಪಂಜಾಬ್ ನಲ್ಲಿ ಈ ಸಮುದಾಯವೇ ಬಹುಸಂಖ್ಯಾತ ಸಮುದಾಯವಾಗಿದೆ. 500 ವರ್ಷಗಳ ಹಿಂದೆ ಜನಿಸಿರುವ ಈ ಧರ್ಮಕ್ಕೆ ಸೇರಿರುವ ಸುಮಾರು 3 ಕೋಟಿ ಮಂದಿ ಸಿಖ್ಖರು ಈ ರಾಜ್ಯವೊಂದರಲ್ಲೇ ವಾಸಿಸುತ್ತಿದ್ದಾರೆ.







