ಕೆನಡಾ ಇತಿಹಾಸದಲ್ಲೇ ಬೃಹತ್ ದರೋಡೆ ಪ್ರಕರಣ: ಮುಖ್ಯ ಆರೋಪಿಯನ್ನು ಗಡೀಪಾರು ಮಾಡುವಂತೆ ಭಾರತಕ್ಕೆ ಮನವಿ

Photo credit: indiatoday.in
ಟೊರಾಂಟೊ: ಕೆನಡಾ ಇತಿಹಾಸದಲ್ಲೇ ಬೃಹತ್ ದರೋಡೆ ಪ್ರಕರಣ ಎಂದು ಹೇಳಲಾಗಿರುವ 20 ದಶಲಕ್ಷ ಮೌಲ್ಯದ ಚಿನ್ನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಸಿಮ್ರಾನ್ ಪ್ರೀತ್ ಪನೇಶರ್ ನನ್ನು ದೇಶದಿಂದ ಗಡೀಪಾರು ಮಾಡುವಂತೆ ಕೆನಡಾ ಪೊಲೀಸರು ಅಧಿಕೃತ ಮನವಿ ಸಲ್ಲಿಸಿದ್ದಾರೆ.
ಎಪ್ರಿಲ್ 2023ರಲ್ಲಿ ಟೊರಾಂಟೊ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದ ಚಿನ್ನದ ದರೋಡೆ ಪ್ರಕರಣದಲ್ಲಿ ಬ್ರಾಂಪ್ಟನ್ ನಿವಾಸಿ ಹಾಗೂ ಏರ್ ಕೆನಡಾದ ಮಾಜಿ ಉದ್ಯೋಗಿಯಾದ 33 ವರ್ಷದ ಸಿಮ್ರಾನ್ ಪ್ರೀತ್ ಪನೇಸರ್ ಮುಖ್ಯ ಆರೋಪಿಯಾಗಿದ್ದಾನೆ.
.9999 ಪರಿಶುದ್ಧತೆಯ ಸುಮಾರು 400 ಕೆಜಿ ಚಿನ್ನದ ತುಂಡುಗಳು ಹಾಗೂ 2.5 ದಶಲಕ್ಷ ಡಾಲರ್ ವಿದೇಶಿ ನಗದನ್ನು ಒಳಗೊಂಡಿದ್ದ ಭಾರಿ ಮೊತ್ತದ ಸರಕನ್ನು ಸ್ಥಳಾಂತರಿಸುವಲ್ಲಿ ಪನೇಸರ್ ನಿರ್ಣಾಯಕ ಪಾತ್ರ ವಹಿಸಿದ್ದಾನೆ ಎಂದು ಕೆನಡಾ ಪೊಲೀಸರು ಆರೋಪಿಸಿದ್ದಾರೆ. ಈ ದರೋಡೆಯ ನಂತರ ಪನೇಸರ್ ಭಾರತಕ್ಕೆ ಪರಾರಿಯಾಗಿದ್ದಾನೆ ಎಂದು ಕೆನಡಾ ಪೊಲೀಸರು ಶಂಕಿಸಿದ್ದು, ಕೆನಡಾದ್ಯಂತ ಬಂಧನ ವಾರೆಂಟ್ ಹಾಗೂ ಗಡೀಪಾರು ಮನವಿಯನ್ನು ಕೆನಡಾ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಸ್ವಿಝರ್ ಲೆಂಡ್ ನ ಝೂರಿಚ್ ನಿಂದ ಟೊರಾಂಟೊ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಭಾರಿ ಮೌಲ್ಯದ ಚಿನ್ನದ ಸರಕನ್ನು ವಿಮಾನ ನಿಲ್ದಾಣದ ಸುರಕ್ಷಿತ ದಾಸ್ತಾನು ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಮರು ದಿನ ಈ ಸರಕು ನಾಪತ್ತೆಯಾಗಿದೆ ಎಂದು ವರದಿಯಾಗಿತ್ತು. ಈ ಕಾರ್ಯಾಚರಣೆಗೆ ‘ಪ್ರಾಜೆಕ್ಟ್ 24ಕೆ’ ಎಂಬ ಗೋಪ್ಯ ನಾಮವಿಡಲಾಗಿತ್ತು.
ಈ ದರೋಡೆಗೆ ದೊಡ್ಡ ಮಟ್ಟದಲ್ಲಿ ಸಮನ್ವಯ ಸಾಧಿಸಲಾಗಿದ್ದು, ಒಳಗಿನವರು ಹಾಗೂ ಹೊರಗಿನವರಿಬ್ಬರೂ ಈ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದಿನವರೆಗೆ ಹತ್ತು ಮಂದಿಯ ವಿರುದ್ಧ 21 ಕೌಂಟ್ ದೋಷಾರೋಪಗಳನ್ನು ಹೊರಿಸಲಾಗಿದೆ.







