ಭಾರತದಲ್ಲಿ ಕ್ಯಾನ್ಸರ್ ಪತ್ತೆಯಾದ ಬಳಿಕ ಐವರಲ್ಲಿ ಮೂವರು ಸಾವು: ವರದಿ

ಸಾಂದರ್ಭಿಕ ಚಿತ್ರ | PC : NDTV
ಹೊಸದಿಲ್ಲಿ: ಭಾರತದಲ್ಲಿ ಕ್ಯಾನ್ಸರ್ಗೆ ಒಳಗಾದ ಪ್ರತಿ ಐವರ ಪೈಕಿ ಮೂವರು ಸಾವನ್ನಪ್ಪುತ್ತಾರೆ. ಇದರಲ್ಲಿ ಪುರುಷರಿಗೆ ಹೋಲಿಸಿದರೆ, ಸ್ತ್ತ್ರಿಯರ ಪ್ರಮಾಣ ಹೆಚ್ಚಾಗಿದೆ ಎಂದು ಜಾಗತಿಕ ಕ್ಯಾನ್ಸರ್ ದತ್ತಾಂಶ ವಿಶ್ಲೇಷಣೆ ಅಂದಾಜಿಸಿದೆ.
ಅಮೆರಿಕದಲ್ಲಿ ಕ್ಯಾನ್ಸರ್ಗೆ ತುತ್ತಾದ ನಾಲ್ವರ ಪೈಕಿ ಓರ್ವರು ಸಾವನ್ನಪ್ಪುವುದು ಕಂಡು ಬಂದಿದೆ. ಚೀನಾದಲ್ಲಿ ಇಬ್ಬರಲ್ಲಿ ಒಬ್ಬರು ಸಾವನ್ನಪ್ಪುವುದು ಕಂಡು ಬಂದಿದೆ ಎಂದು ‘ದಿ ಲ್ಯಾನ್ಸೆಟ್ ರೀಜನಲ್ ಹೆಲ್ತ್ ಸೌತ್ಈಸ್ಟ್ ಏಷಿಯಾ’ ಜರ್ನಲ್ ಪ್ರಕಟಿಸಿದ ವರದಿ ಹೇಳಿದೆ.
ಚೀನಾ ಹಾಗೂ ಅಮೆರಿಕದ ಬಳಿಕ ಮೂರನೇ ಅತ್ಯಧಿಕ ಕ್ಯಾನ್ಸರ್ ಪ್ರಕರಣಗಳು ಇರುವ ದೇಶ ಭಾರತ. ಅಲ್ಲದೆ, ಅದು ಕ್ಯಾನ್ಸರ್ ಸಂಬಂಧಿತ ಸಾವುಗಳಲ್ಲಿ ಚೀನಾದ ನಂತರ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅಧ್ಯಯನ ತಿಳಿಸಿದೆ.
ಮುಂದಿನ ಎರಡು ದಶಕಗಳಲ್ಲಿ ಭಾರತವು ಕ್ಯಾನ್ಸರ್ ಸಂಬಂಧಿಸಿದ ಸಾವುಗಳನ್ನು ನಿರ್ವಹಿಸುವಲ್ಲಿನ ಭೀಕರ ಸವಾಲನ್ನು ಎದುರಿಸಲಿದೆ. ಅಲ್ಲದೆ, ವಯೋವೃದ್ಧ ಜನಸಂಖ್ಯೆಯಲ್ಲಿ ವಾರ್ಷಿಕ ಶೇ. 2 ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಲಿವೆ ಎಂದು ಅವರು ತಿಳಿಸಿದ್ದಾರೆ.
ಗ್ಲೋಬಲ್ ಕ್ಯಾನ್ಸರ್ ಆಬ್ಸರ್ವೇಟರಿ (ಗ್ಲೋಬೋಕ್ಯಾನ್) 2022 ಹಾಗೂ ಗ್ಲೋಬಲ್ ಹೆಲ್ತ್ ಆಬ್ಸರ್ವೇಟರಿ (ಜಿಎಚ್ಒ) ಡಾಟಾಬೇಸ್ಗಳನ್ನು ಬಳಸಿ ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ ವಿವಿಧ ಪ್ರಾಯ ಗುಂಪುಗಳಲ್ಲಿ, ಪುರುಷ ಹಾಗೂ ಮಹಿಳೆಯರಲ್ಲಿ 36 ಮಾದರಿಯ ಕ್ಯಾನ್ಸರ್ ಪ್ರವೃತ್ತಿಗಳನ್ನು ಕೂಡ ಸಂಶೋಧಕರು ಪರಿಶೀಲಿಸಿದ್ದಾರೆ.
ಭಾರತದಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾದ ಬಳಿಕ ಐವರಲ್ಲಿ ಸುಮಾರು ಮೂವರು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.







