ನೋಯ್ಡಾ | ಎಸ್ಐಆರ್ ಹೊರೆ : ಮತಗಟ್ಟೆ ಅಧಿಕಾರಿ ಜವಾಬ್ಧಾರಿ ತೊರೆದ ಶಿಕ್ಷಕಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ತಮ್ಮ ಬೋಧನೆಯ ಕರ್ತವ್ಯ ಹಾಗೂ ಮತಪಟ್ಟಿಗಳ ವಿಶೇಷ ಮತಪಟ್ಟಿ ಪರಿಷ್ಕರಣೆಗಳೆರಡರ ಕರ್ತವ್ಯದ ಹೊಣೆಗಾರಿಕೆಯನ್ನು ನಿರ್ವಹಿಸಲು ಸಾಧ್ಯಾವಿಲ್ಲ ಎಂದು ಉಲ್ಲೇಖಿಸಿ, ನೊಯ್ಡಾದ ಸಹಾಯಕ ಶಿಕ್ಷಕಿಯೊಬ್ಬರು ತಮ್ಮ ಮತಗಟ್ಟೆ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ನೊಯ್ಡಾದ ಸೆಕ್ಟರ್ 94ರಲ್ಲಿರುವ ಗೇಜಾ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪಿಂಕಿ ಸಿಂಗ್ ಎಂಬವರು ತಮ್ಮ ಹುದ್ದೆಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಆ ಪತ್ರದಲ್ಲಿ, “ಬೋಧನೆ ಮತ್ತು ವಿಶೇಷ ಮತಪಟ್ಟಿ ಪರಿಷ್ಕರಣೆ ಎರಡರ ಕೆಲಸದ ಹೊರೆ ವಿಪರೀತವಾಗಿದ್ದು, ನಾನು ಥೈರಾಯ್ಡ್ ಸಮಸ್ಯೆ ಹಾಗೂ ಕೌಟುಂಬಿಕ ಒತ್ತಡದಿಂದಲೂ ಬಳಲುತ್ತಿದ್ದೇನೆ. ಇದರಿಂದಾಗಿ ಬೋಧನಾ ಕರ್ತವ್ಯ ಹಾಗೂ ಮತಗಟ್ಟೆ ಅಧಿಕಾರಿ ಕರ್ತವ್ಯಗಳೆರಡನ್ನೂ ಒಟ್ಟಾಗಿ ನಿರ್ವಹಿಸುವುದು ಸವಾಲಾಗಿ ಪರಿಣಮಿಸಿದೆ” ಎಂದು ಜಿಲ್ಲಾ ಚುನಾವಣಾಧಿಕಾರಿಗೆ ತಿಳಿಸಿದ್ದಾರೆ. ಈ ರಾಜೀನಾಮೆ ಪತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನದ ಬೆನ್ನಿಗೇ ಈ ಘಟನೆ ನಡೆದಿದೆ.
ನೊಯ್ಡಾದ ಸೆಕ್ಟರ್ 33ರಲ್ಲಿರುವ ರಾಕ್ ವುಡ್ ಶಾಲೆಯಲ್ಲಿನ ಮತ ಕೇಂದ್ರದಲ್ಲಿರುವ 1,179 ಮತಗಳ ಉಸ್ತುವಾರಿಯನ್ನು ಮತಗಟ್ಟೆ ಅಧಿಕಾರಿಯಾಗಿ ನೇಮಕಗೊಂಡಿದ್ದ ಪಿಂಕಿ ಸಿಂಗ್ ಅವರಿಗೆ ವಹಿಸಲಾಗಿತ್ತು ಎನ್ನಲಾಗಿದೆ.
“ಈ 1,179 ಮತದಾರರ ಪೈಕಿ, ನನಗೆ 215 ಮತದಾರರ ಕುರಿತು ಮಾತ್ರ ಆನ್ ಲೈನ್ ನಲ್ಲಿ ಮಾಹಿತಿ ಸಲ್ಲಿಸಲು ಸಾಧ್ಯವಾಗಿದೆ. ನಾನು ಈ ಕೆಲಸವನ್ನು ಇನ್ನು ಮಾಡಲು ಸಾಧ್ಯವಿಲ್ಲದಿರುವುದರಿಂದ, ನಾನು ನನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ” ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ವಿವರಿಸಿದ್ದಾರೆ. ಅಲ್ಲದೆ, ಚುನಾವಣಾ ಸಂಬಂಧಿತ ಸಾಮಗ್ರಿಗಳನ್ನು ಹೇಗೆ ಸೂಕ್ತವಾಗಿ ಹಸ್ತಾಂತರಿಸಬೇಕು ಎಂಬ ಕುರಿತು ಮಾರ್ಗದರ್ಶನ ನೀಡುವಂತೆಯೂ ಅವರು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.
ವಿಶೇಷ ಮತಪಟ್ಟಿ ಪರಿಷ್ಕರಣೆ ಅಭಿಯಾನದಲ್ಲಿ ಭಾಗಿಯಾಗಿರುವ ಕೆಲವು ಮತಗಟ್ಟೆ ಅಧಿಕಾರಿಗಳು ಕೆಲಸ ಒತ್ತಡ ತಾಳಲಾರದೆ ಪಶ್ಚಿಮ ಬಂಗಾಳ ಮತ್ತು ಗುಜರಾತ್ ರಾಜ್ಯಗಳಲ್ಲಿ ಆತ್ಮಹತ್ಯೆ ಘಟನೆಗಳು ಇತ್ತೀಚೆಗೆ ವರದಿಯಾಗಿದ್ದವು. ಇದೀಗ, ಉತ್ತರ ಪ್ರದೇಶದಲ್ಲೂ ಕೆಲಸದ ಒತ್ತಡ ತಾಳಲಾರದೆ ಶಿಕ್ಷಕಿಯೊಬ್ಬರು ಮತಗಟ್ಟೆ ಅಧಿಕಾರಿಯ ಹುದ್ದೆಗೆ ರಾಜೀನಾಮೆ ನೀಡಿರುವುದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.







