ಜಿಎಸ್ಟಿ ಕಡಿತದ ಪೂರ್ಣ ಪ್ರಯೋಜನ ಬಳಕೆದಾರರನ್ನು ತಲುಪಲು ನಿಗಾ: ಗೋಯಲ್

ಪೀಯುಶ್ ಗೋಯಲ್ | PC : PTI
ಹೊಸದಿಲ್ಲಿ, ಸೆ. 5: ಜಿಎಸ್ಟಿ ಸರಳೀಕರಣದ ಸಂಪೂರ್ಣ ಲಾಭ ಬಳಕೆದಾರರಿಗೆ ಹೋಗುವಂತೆ ಖಾತರಿಪಡಿಸಲು ಕೇಂದ್ರ ಸರಕಾರವು ನಿಗಾ ಇಡುವುದು ಎಂದು ಕೇಂದ್ರ ಸಚಿವ ಪೀಯುಶ್ ಗೋಯಲ್ ಶುಕ್ರವಾರ ಹೇಳಿದ್ದಾರೆ.
ವಿವಿಧ ವಸ್ತುಗಳ ಮೇಲಿನ ತೆರಿಗೆಯಲ್ಲಿ ಆಗಿರುವ ಸಂಪೂರ್ಣ ಕಡಿತವು ಅವುಗಳ ಬೆಲೆಗಳಲ್ಲಿ ಪ್ರತಿಫಲಿಸುವುದು ಎಂಬುದಾಗಿ ಉದ್ದಿಮೆಗಳು ತನಗೆ ಭರವಸೆ ನೀಡಿವೆ ಎಂದು ಅವರು ತಿಳಿಸಿದ್ದಾರೆ.
ಚಟಗಳಿಗೆ ಸಂಬಂಧಿಸಿದ ವಸ್ತುಗಳನ್ನು ಹೊರತುಪಡಿಸಿ ಇತರ ಎಲ್ಲಾ ವಸ್ತುಗಳನ್ನು 5% ಮತ್ತು 18% ಜಿಎಸ್ಟಿ ಹಂತಗಳ ವ್ಯಾಪ್ತಿಗೆ ತರುವ ಮತ್ತು ಹಲವು ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಶೂನ್ಯಕ್ಕೆ ಇಳಿಸುವ ಜಿಎಸ್ಟಿ ಮಂಡಳಿಯ ನಿರ್ಧಾರವು ಸೆಪ್ಟಂಬರ್ 22ರಿಂದ ಜಾರಿಗೆ ಬರಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಉತ್ಪನ್ನಗಳಿಗೆ 50 ಶೇಕಡ ತೆರಿಗೆ ವಿಧಿಸುವ ಅಮೆರಿಕದ ನಿರ್ಧಾರವು, ದೇಶದಲ್ಲಿ ತೆರಿಗೆ ಸುಧಾರಣೆಗೆ ಸರಕಾರವನ್ನು ಪ್ರೇರೇಪಿಸಿರಬಹುದು ಎಂಬ ವಾದವನ್ನು ತಿರಸ್ಕರಿಸಿದರು. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ಕಾರ್ಯದರ್ಶಿಗಳು ಮತ್ತು ಹಣಕಾಸು ಸಚಿವರೊಂದಿಗಿನ ಒಂದು ವರ್ಷ ಅವಧಿಯ ಸಮಾಲೋಚನೆಯ ಫಲಿತಾಂಶ ಈ ನಿರ್ಧಾರವಾಗಿದೆ ಎಂದು ಅವರು ತಿಳಿಸಿದರು.
ತೆರಿಗೆ ಇಳಿಕೆಯ ಎಲ್ಲಾ ಪ್ರಯೋಜನವು ಬಳಕೆದಾರರಿಗೆ ಹೋಗುವಂತೆ ನೋಡಿಕೊಳ್ಳಲು ಕೇಂದ್ರ ಸರಕಾರವು ನಿಗಾ ಇಡುತ್ತದೆ ಎಂದು ಹೇಳಿದ ಅವರು, ರಾಜ್ಯಗಳೂ ಇದರ ಮೇಲೆ ನಿಗಾ ಇಡಬೇಕು ಎಂದರು.







