ರಾಮಪ್ರಸ್ಥ ಗ್ರೂಪ್ ವಿರುದ್ಧದ ಪ್ರಕರಣ | ವಾಟಿಕಾ, ಯುನಿಟೆಕ್ ಆಸ್ತಿಗಳನ್ನು ಜಪ್ತಿ ಮಾಡಿದ ED

Photo Credit : PTI
ಹೊಸದಿಲ್ಲಿ,ಡಿ.19: ಗುರುಗ್ರಾಮ ಮೂಲದ ರಾಮಪ್ರಸ್ಥ ಗ್ರೂಪ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ED) ವಾಟಿಕಾ ಮತ್ತು ಯುನಿಟೆಕ್ ಗ್ರೂಪ್ ನಂತಹ ರಿಯಲ್ ಎಸ್ಟೇಟ್ ಕಂಪನಿಗಳ 80 ಕೋಟಿ ರೂ.ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ. ರಾಮಪ್ರಸ್ಥ ಮನೆ ಖರೀದಿದಾರರನ್ನು ವಂಚಿಸಿದ ಆರೋಪವನ್ನು ಎದುರಿಸುತ್ತಿದೆ.
ತನಿಖೆಯು ರಾಮಪ್ರಸ್ಥ ಪ್ರಮೋಟರ್ಸ್ ಆ್ಯಂಡ್ ಡೆವಲಪರ್ಸ್ ಪ್ರೈ.ಲಿ.(ಆರ್ಪಿಡಿಪಿಎಲ್) ಮತ್ತು ಅದರ ಸಹಸಂಸ್ಥೆಗಳಿಗೆ ಸಂಬಂಧಿಸಿದ್ದು,ಜಪ್ತಿ ಮಾಡಲಾದ ಚರ ಮತ್ತು ಸ್ಥಿರಾಸ್ತಿಗಳ ಒಟ್ಟು ಮೌಲ್ಯ 80.03 ಕೋ.ರೂ.ಗಳಾಗಿವೆ ಎಂದು ED ಹೇಳಿಕೆಯಲ್ಲಿ ತಿಳಿಸಿದೆ.
ಮನೆ ಖರೀದಿದಾರರಿಂದ ಸಂಗ್ರಹಿಸಲಾಗಿದ್ದ ಹಣವನ್ನು ಆರ್ಪಿಡಿಪಿಎಲ್ನ ಯೋಜನೆಗಳಿಗೆ ಬಳಸುವ ಬದಲು ವಾಟಿಕಾ ಗ್ರುಪ್,ಯುನಿಟೆಕ್ ಗ್ರುಪ್ ಮತ್ತು ಇತರ ಸಂಸ್ಥೆಗಳಿಗೆ ಅಕ್ರಮವಾಗಿ ವರ್ಗಾಯಿಸಲಾಗಿತ್ತು ಎಂದು ED ಹೇಳಿದೆ. ತನಿಖೆಯ ಅಂಗವಾಗಿ ED ಈ ಹಿಂದೆ 786 ಕೋಟಿ ರೂ.ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಇತ್ತೀಚಿಗೆ ಜಪ್ತಿ ಮಾಡಲಾದ
ಆಸ್ತಿಗಳೊಂದಿಗೆ ಇಂತಹ ಆಸ್ತಿಗಳ ಒಟ್ಟು ಮೌಲ್ಯವೀಗ 866 ಕೋಟಿ ರೂ.ಗಳಿಗೇರಿದೆ.
ಆರ್ಪಿಡಿಪಿಎಲ್ ಮತ್ತು ಅದರ ಪ್ರವರ್ತಕರ ವಿರುದ್ಧ ಮನೆ ಖರೀದಿದಾರರ ದೂರುಗಳ ಮೇರೆಗೆ ದಿಲ್ಲಿ ಮತ್ತು ಹರ್ಯಾಣ ಪೋಲಿಸರ ಆರ್ಥಿಕ ಅಪರಾಧಗಳ ಘಟಕಗಳು ದಾಖಲಿಸಿರುವ ಹಲವಾರು ಎಫ್ಐಆರ್ಗಳನ್ನು EDಯ ಅಕ್ರಮ ಹಣ ವರ್ಗಾವಣೆ ಪ್ರಕರಣವು ಆಧರಿಸಿದೆ.
ಆರೋಪಿಗಳು ಫ್ಲ್ಯಾಟ್ ಗಳು ಅಥವಾ ನಿವೇಶನಗಳನ್ನು ನಿಗದಿತ ಸಮಯದೊಳಗೆ ತಮಗೆ ಹಸ್ತಾಂತರಿಸಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.
ಕಂಪೆನಿಯು ತನ್ನ ಯೋಜನೆಗಳಿಗಾಗಿ 2,000ಕ್ಕೂ ಅಧಿಕ ಮನೆ ಖರೀದಿದಾರರಿಂದ ಸುಮಾರು 1,100 ಕೋಟಿ ರೂ.ಗಳನ್ನು ಸಂಗ್ರಹಿಸಿತ್ತು.
ಆರ್ಪಿಡಿಪಿಎಲ್ನ ನಿರ್ದೇಶಕರಾದ ಅರವಿಂದ್ ವಾಲಿಯಾ ಮತ್ತು ಸಂದೀಪ್ ಯಾದವ್ ರನ್ನು ED ಕಳೆದ ಜುಲೈನಲ್ಲಿ ಬಂಧಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.







