ನಗದು ಪತ್ತೆ ಪ್ರಕರಣ | ನ್ಯಾ.ಯಶವಂತ್ ವರ್ಮಾ ವಿರುದ್ಧದ ಆರೋಪಗಳ ಕುರಿತು ತನಿಖೆಗೆ ಮೂವರು ಸದಸ್ಯರ ಸಮಿತಿ ರಚನೆ

ನ್ಯಾಯಮೂರ್ತಿ ಯಶವಂತ್ ವರ್ಮಾ
ಹೊಸದಿಲ್ಲಿ : ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ ಆರೋಪಗಳ ಕುರಿತು ತನಿಖೆಗಾಗಿ ಲೋಕಸಭಾ ಸಭಾಪತಿ ಓಂ ಬಿರ್ಲಾ ಮಂಗಳವಾರ ಮೂವರು ಸದಸ್ಯರ ಸಮಿತಿಯನ್ನು ಘೋಷಿಸಿದ್ದಾರೆ. ಈ ಮೂಲಕ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಿಂದ ಭಾರಿ ಪ್ರಮಾಣದ ನಗದು ಪತ್ತೆ ಪ್ರಕರಣದ ತನಿಖೆ ವೇಗವನ್ನು ಪಡೆದುಕೊಂಡಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಣಿಂದರ್ ಮೋಹನ್ ಮತ್ತು ಹಿರಿಯ ವಕೀಲ ಬಿ. ವಾಸುದೇವ ಆಚಾರ್ಯ ಅವರು ಸಮಿತಿಯ ಸದಸ್ಯರಾಗಿದ್ದಾರೆ.
ನ್ಯಾಯಾಧೀಶರ ವಿರುದ್ಧದ ಮಹಾಭಿಯೋಗಕ್ಕೆ 146 ಸಂಸದರು ಸಹಿ ಮಾಡಿದ ನಿರ್ಣಯವನ್ನು ಅಂಗೀಕರಿಸಿದ ಸ್ಪೀಕರ್, ಸಮಿತಿಯು ಸಾಧ್ಯವಾದಷ್ಟು ಬೇಗ ತನ್ನ ವರದಿಯನ್ನು ಸಲ್ಲಿಸಲಿದೆ. ವರದಿ ಬರುವವರೆಗೂ ಪ್ರಸ್ತಾವನೆಯು ಬಾಕಿ ಇರುತ್ತದೆ ಎಂದು ಹೇಳಿದರು.
ನ್ಯಾಯಾಧೀಶರ ದೋಷಾರೋಪಣೆಯ ಕಾರ್ಯವಿಧಾನವನ್ನು ಸಂವಿಧಾನದ 124(4) ನೇ ವಿಧಿಯ ಅಡಿಯಲ್ಲಿ ನಿಗದಿಪಡಿಸಲಾಗಿದೆ. ಲೋಕಸಭೆಯಿಂದ ರಚಿಸಲ್ಪಟ್ಟ ಸಮಿತಿಯು ಈ ಕುರಿತ ವರದಿಯನ್ನು ಸ್ಪೀಕರ್ಗೆ ಸಲ್ಲಿಸಲಿದೆ. ನಂತರ ಅವರು ಅದನ್ನು ಸದನದಲ್ಲಿ ಮುಂಡಿಸಲಿದ್ದಾರೆ.







