ಉತ್ತರ ಪ್ರದೇಶ | ಯಾದವರೆಂದು ತಿಳಿದ ಬಳಿಕ ಧಾರ್ಮಿಕ ಪ್ರವಾಚಕ, ಸಹಾಯಕನ ತಲೆ ಬೋಳಿಸಿದ ಪ್ರಬಲ ಜಾತಿ ಜನರು

ಸಾಂದರ್ಭಿಕ ಚಿತ್ರ
ಇಟಾವ: ಧಾರ್ಮಿಕ ಪ್ರವಾಚಕ ಹಾಗೂ ಅವರ ಸಹಾಯಕ ಯಾದವ ಸಮುದಾಯಕ್ಕೆ ಸೇರಿದವರು ಎಂದು ತಿಳಿದ ಬಳಿಕ ಪ್ರಬಲ ಜಾತಿಯ ಗುಂಪೊಂದು ಅವರ ತಲೆ ಬೋಳಿಸಿದ ಘಟನೆ ಉತ್ತರಪ್ರದೇಶದ ಇಟಾವ ಜಿಲ್ಲೆಯ ದಂಡರಪುರ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಧಾರ್ಮಿಕ ಪ್ರವಾಚಕ ಹಾಗೂ ಅವರ ಸಹಾಯಕನ ತಲೆ ಬೋಳಿಸಿದ ಘಟನೆ ರವಿವಾರ ತಡ ರಾತ್ರಿ ನಡೆದಿದ್ದು, ಘಟನೆಗೆ ಸಂಬಂಧಿಸಿ ಆರೋಪಿಗಳನ್ನು ಸೋಮವಾರ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಂತ್ರಸ್ತರು ಕಥೆ ಹೇಳುವವರಾಗಿದ್ದು (ಪವಿತ್ರ ಪಠ್ಯಗಳ ನಿರೂಪಕರು), ‘ಭಗವದ್ ಕಥೆ’ ಹೇಳಲು ಗ್ರಾಮಗಳಿಗೆ ತೆರಳುತ್ತಿದ್ದರು.
ಈ ಘಟನೆಗೆ ಸಂಬಂಧಿಸಿದ ವೀಡಿಯೊ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಭಗವತ್ ಕಥೆಯ ಬಳಿಕ ಗ್ರಾಮಸ್ಥರು ಈ ಇಬ್ಬರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು ಹಾಗೂ ಅವರ ತಲೆಯನ್ನು ಬೋಳಿಸುತ್ತಿರುವುದನ್ನು ಕಾಣಬಹುದು ಎಂದು ಹಿರಿಯ ಪೊಲೀಸ್ ವರಿಷ್ಠ ಬ್ರಿಜೇಶ್ ಕುಮಾರ್ ಶ್ರೀವಾತ್ಸವ ತಿಳಿಸಿದ್ದಾರೆ.
ಸಂತ್ರಸ್ತರು ದಾಖಲಿಸಿದ ದೂರಿನ ಆಧಾರದಲ್ಲಿ ಇಟವಾ ಜಿಲ್ಲೆಯ ಬೇಕೆವಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಧಾನ ಆರೋಪಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಎಸ್ಎಸ್ಪಿ ತಿಳಿಸಿದ್ದಾರೆ.
ನಾಲ್ವರು ಆರೋಪಿಗಳನ್ನು ಆಶಿಷ್ ತಿವಾರಿ, ಉತ್ತಮ್ ಕುಮಾರ್ ಅವಸ್ಥಿ, ನಿಕ್ಕಿ ಅವಸ್ಥಿ, ಮನು ದುಬೆ ಎಂದು ಗುರುತಿಸಲಾಗಿದೆ. ಎಲ್ಲರೂ ದಂಡರಪುರದ ನಿವಾಸಿಗಳು ಎಂದು ಅವರು ಹೇಳಿದ್ದಾರೆ.







