ಜಾನುವಾರು ಕಳ್ಳಸಾಗಣೆ ಹಗರಣ: ಸುಕನ್ಯಾ ಮೊಂಡಲ್ ಜಾಮೀನು ಅರ್ಜಿ; ಈ.ಡಿ.ಪ್ರತಿಕ್ರಿಯೆ ಕೇಳಿದ ದಿಲ್ಲಿ ಕೋರ್ಟ್

ಸಾಂದರ್ಭಿಕ ಚಿತ್ರ \ Photo: PTI
ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ಜಾನುವಾರು ಕಳ್ಳಸಾಗಣಿಕೆಗೆ ಸಂಬಂಧಿಸಿದ ಕಪ್ಪುಹಣ ಬಿಳುಪು ಪ್ರಕರಣದ ಆರೋಪಿ ಸುಕನ್ಯಾ ಮೊಂಡಲ್ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆಗೆ ಸಂಬಂಧಿಸಿ, ದಿಲ್ಲಿಯ ನ್ಯಾಯಾಲಯವು ಬುಧವಾರ ಜಾರಿ ನಿರ್ದೇಶನಾಲಯದ ಪ್ರತಿಕ್ರಿಯೆಯನ್ನು ಕೇಳಿದೆ.
ಟಿಎಂಸಿ ನಾಯಕ ಅನುಬ್ರತ ಮೊಂಡಲ್ ಅವರ ಪುತ್ರಿಯಾದ ಸುಕನ್ಯಾ ಮೊಂಡಲ್ ಅವರನ್ನು ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜಾರಿ ನಿರ್ದೇಶನಾಲಯ(ಈ.ಡಿ.)ಕ್ಕೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರು, ಪ್ರಕರಣದ ಕುರಿತ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ ಹಾಗೂ ಪ್ರಕರಣದ ಆಲಿಕೆಯನ್ನು ಆಗಸ್ಟ್ 9ಕ್ಕೆ ನಿಗದಿಪಡಿಸಿದೆ.ಎಪ್ರಿಲ್ 26ರಂದು ಜಾರಿ ನಿರ್ದೇಶನಾಲಯದಿಂದ ಬಂಧಿತರಾದ ಸುಕನ್ಯಾ ಮೊಂಡಲ್ ಅವರು, ತನಗೆ ಜಾಮೀನು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಜೂನ್ 1ರ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರೆ ಪರ ವಕೀಲರು ಇಂದು ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಾ, ಪ್ರಕರಣದ ಸಹ ಆರೋಪಿಯಾದ ತಾನಿಯಾ ಸನ್ಯಾಲ್ಗೆ ವಿಚಾರಣಾ ನ್ಯಾಯಾಲಯ ಜಾಮೀನು ನೀಡಿದೆ. ಆದುದರಿಂದ ಇನ್ನೋರ್ವ ಆರೋಪಿ ಸುಕನ್ಯಾ ಮೊಂಡಲ್ಗೂ ಜಾಮೀನು ನೀಡುವುದು ಸಮಂಜಸವೆಂದು ವಾದಿಸಿದ್ದರು.
ತಾನಿಯಾ ಸನ್ಯಾಲ್ ಅವರು ಪ್ರಕರಣದ ಆರೋಪಿ ಇನಾಮುಲ್ ಹಕ್ನಿಂದ ಲಂಚವನ್ನು ಸ್ವೀಕರಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ. ಇನ್ನೋರ್ವ ಆರೋಪಿಯಾದ ಸುಕನ್ಯಾ ಮೊಂಡಲ್ ಈ ಹಣವನ್ನು ಬಿಳುಪುಗೊಳಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.
ಟಿಎಂಸಿ ನಾಯಕ ಅನುಬ್ರತ ಮೊಂಡಲ್ ಹಾಗೂ ಸುಕನ್ಯಾ ಮೊಂಡಲ್ಳ ಪತಿ ಸತೀಶ್ ಕುಮಾರ್ , ಇತರ ಕೆಲವು ಸರಕಾರಿ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳು ಬಹುಕೋಟಿ ಜಾನುವಾರು ಕಳ್ಳಸಾಗಣಿಕೆ ಜಾಲದಲ್ಲಿ ಶಾಮೀಲಾಗಿದ್ದಾರೆಂದು ಇ.ಡಿ. ಆಪಾದಿಸಿದೆ.
ಬಹುಕೋಟಿ ರೂ. ವೌಲ್ಯದ ಜಾನುವಾರು ಕಳ್ಳಸಾಗಣಿಕೆ ಹಗರಣದಲ್ಲಿ ಆರೋಪಿಯಾಗಿರುವ ಅನುಬ್ರತ ಮೊಂಡಲ್ ಅವರನ್ನು ಕಳೆದ ವರ್ಷದ ಆಗಸ್ಟ್ 11ರಂದು ಬಂಧಿಸಲಾಗಿತ್ತು.







