100 ಕೋಟಿ ರೂ. ನಕಲಿ ಜಿಎಸ್ಟಿ ಮರುಪಾವತಿ ಹಗರಣ ಭೇದಿಸಿದ ಸಿಬಿಐ

CBI
ಹೊಸದಿಲ್ಲಿ: ಸುಮಾರು 100 ಕೋಟಿ ರೂ.ಮೊತ್ತದ ಬೋಗಸ್ ಜಿಎಸ್ಟಿ ಮರುಪಾವತಿ ಕ್ಲೇಮುಗಳನ್ನು ಒಳಗೊಂಡ ಪ್ರಕರಣಕ್ಕೆ ಸಂಬಂಧಿಸಿ ಬೃಹತ್ ಜಾಲವೊಂದನ್ನು ಕೇಂದ್ರೀಯ ತನಿಖಾ ದಳವು ಭೇದಿಸಿದೆ.
ಪಟ್ನಾ, ಪೂರ್ನಿಯಾ, ಜಮ್ಶೇಡ್ಪುರ, ನಳಂದಾ ಹಾಗೂ ಮುಂಗೇರ್ ನಗರಗಳನ್ನು ಒಳಗೊಂಡ ಏಳು ಪ್ರದೇಶಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ಪಾಟ್ನಾದ ಹಿಂದಿನ ಹೆಚ್ಚುವರಿ ಕಸ್ಟಮ್ಸ್ ಆಯುಕ್ತ ರಣವಿಜಯ್ ಕುಮಾರ್ ಹಾಗೂ ಈಗ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ನಾಲ್ವರು ಮಾಜಿ ಅಧೀಕ್ಷಕರು ಸೇರಿದಂತೆ ಕಸ್ಟಮ್ಸ್ ಇಲಾಖೆಯ ಹಿರಿಯ ಅಧಿಕಾರಿಗಳು ಈ ಹಗರಣದಲ್ಲಿ ಭಾಗಿಯಾಗಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.
ಜಿಎಸ್ಟಿ ತೆರಿಗೆ ಮರುಪಾವತಿಗಳನ್ನು ವಂಚನೆಯಿಂದ ಕ್ಲೇಮುಮಾಡುವುದಕ್ಕಾಗಿ ನಕಲಿಬಿಲ್ ಗಳನ್ನು ತೋರಿಸಲು ಆರೋಪಿಗಳು, ಖಾಸಗಿ ಜಿ-ಕಾರ್ಡ್ದಾರರು,ಹಲವು ರಫ್ತುದಾರ ಹಾಗೂ ಅಮದುದಾರ ಸಂಸ್ಥೆಗಳೊಂದಿಗೆ ಶಾಮೀಲಾಗಿದ್ದರೆಂದು ಸಿಬಿಐ ಆಪಾದಿಸಿದೆ.
ಜಿಎಸ್ಟಿ ಕಚೇರಿಗಳಿಂದ ಜಿಎಸ್ಟಿ ಮರುಪಾವತಿಗಳನ್ನು ಪಡೆಯಲು ಈ ದಾಖಲೆಗಳನ್ನು ಬಳಸಿಕೊಂಡಿದ್ದಾರೆಂದು ಸಿಬಿಐ ಹೇಳಿದೆ.
ಭೀಮಾನಗರ, ಜಯನಗರ ಹಾಗೂ ಭಿಟ್ಟಾಮೊರ್ಗಳಲ್ಲಿರುವ ಲ್ಯಾಂಡ್ ಕಸ್ಟಮ್ಸ್ ಠಾಣೆಗಳ (ಎಲ್ಸಿಎಸ್)ಟೈಲ್ಸ್ಗಳು ಹಾಗೂ ಆಟೋಮೊಬೈಲ್ ಬಿಡಿಭಾಗಗಳ ನಕಲಿ ರಫ್ತುಗ ಬಿಲ್ಗಳನ್ನು ಪ್ರದರ್ಶಿಸಲು ಆರೋಪಿಗಳು ಸಂಚುಹೂಡಿದ್ದರು ಎಂದು ಸಿಬಿಐ ಆಪಾದಿಸಿದೆ.
ಶೋಧ ಕಾರ್ಯಾಚರಣೆ ಸಂದರ್ಭ ಅಧಿಕಾರಿಗಳು ತಲಾ 100 ಗ್ರಾಂ.ನ 7 ಚಿನ್ನದ ಬಾರ್ಗಳು, ಹಲವಾರು ಅಕ್ರಮ ದಾಖಲೆಗಳು ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಸಿಬಿಐ, ಕ್ರಿಮಿನಲ್ ಸಂಚು ಹಾಗೂ ಭ್ರಷ್ಟಾಚಾರದ ಆರೋಪವನ್ನು ದಾಖಲಿಸಿದೆ.







