8.5 ಲಕ್ಷ ಮ್ಯೂಲ್ ಖಾತೆಗಳ ಪ್ರಕರಣ | ಶಂಕಿತ ಬ್ಯಾಂಕ್ ಅಧಿಕಾರಿಗಳ ವಿಚಾರಣೆಗೆ ಸಿಬಿಐ ಸಜ್ಜು

PC ; X
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆಗೆ ಸೈಬರ್ ಅಪರಾಧ ಜಾಲಗಳೊಂದಿಗೆ ಅಖಿಲ ಭಾರತ ಮಟ್ಟದ ಪಿತೂರಿಯಲ್ಲಿ 8.5 ಲಕ್ಷ ಮ್ಯೂಲ್ ಖಾತೆಗಳ(ಅಕ್ರಮ ಹಣ ವರ್ಗಾವಣೆಗಾಗಿ ಬೇರೆಯವರ ಹೆಸರುಗಳಲ್ಲಿಯ ಬ್ಯಾಂಕ್ ಖಾತೆಗಳನ್ನು ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಿರ್ವಹಿಸುವುದು) ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟ ಆರೋಪದಲ್ಲಿ ಶಂಕಿತ ಬ್ಯಾಂಕ್ ಅಧಿಕಾರಿಗಳನ್ನು ಸಿಬಿಐ ವಿಚಾರಣೆಗೆ ಒಳಪಡಿಸಲಿದೆ ಎಂದು ತನಿಖಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಸಂಖ್ಯಾತ ಮ್ಯೂಲ್ ಖಾತೆಗಳಲ್ಲಿ ನಿಗದಿತ ಮಿತಿಯನ್ನು ಮೀರಿ ವಹಿವಾಟುಗಳು ನಡೆಯುತ್ತಿದ್ದರೂ ಶಂಕಿತ ವಹಿವಾಟು ವರದಿ(ಎಸ್ಟಿಆರ್)ಗಳನ್ನು ತಯಾರಿಸುವಲ್ಲಿ ವ್ಯವಸ್ಥಿತ ವೈಫಲ್ಯ ಸಿಬಿಐ ತನ್ನ ಎರಡು ತಿಂಗಳುಗಳ ತನಿಖೆಯಲ್ಲಿ ಪತ್ತೆ ಹಚ್ಚಿರುವ ಪ್ರಮುಖ ಲೋಪವಾಗಿದ್ದು,ಇದು ಅನುಮಾನಾಸ್ಪದ ಚಟುವಟಿಕೆಗಳ ಸ್ಪಷ್ಟ ಸೂಚಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸಿಬಿಐ ಇತ್ತೀಚಿಗೆ ದಾಖಲಿಸಿಕೊಂಡಿರುವ ಎಫ್ಐಆರ್ ಪ್ರಕಾರ, ಅಧಿಕಾರಿಗಳು ಖಾತೆಗಳನ್ನು ತೆರೆಯುವ ಸಂದರ್ಭದಲ್ಲಿ ಗ್ರಾಹಕರ ಪೂರ್ವಾಪರಗಳನ್ನು ಖಚಿತಪಡಿಸಿಕೊಳ್ಳುವಲ್ಲಿ ವಿಫಲಗೊಂಡಿದ್ದಾರೆ. ಇದು ಆರಂಭಿಕ ಅಪಾಯ ಮೌಲ್ಯಮಾಪನಕ್ಕಾಗಿ ಮತ್ತು ಗ್ರಾಹಕರ ನಿಖರವಾದ ಗುರುತು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪ್ರಕ್ರಿಯೆಯಾಗಿದೆ. ಈ ಮೂಲಭೂತ ಕಡೆಗಣನೆಯು ಗ್ರಾಹಕರು ಒಡ್ಡಬಹುದಾದ ಆರ್ಥಿಕ ಅಪರಾಧಗಳ ಅಪಾಯಗಳನ್ನು ಸಮರ್ಪಕವಾಗಿ ಪರಿಶೀಲಿಸಲಾಗಿಲ್ಲ ಎನ್ನುವುದನ್ನು ಸೂಚಿಸುತ್ತದೆ.
ಡಿಜಿಟಲ್ ವಂಚನೆಗಳ ಮೂಲಕ ಗಳಿಸಲಾದ ಕಾನೂನುಬಾಹಿರ ಆದಾಯವನ್ನು ವರ್ಗಾವಣೆ ಮಾಡಲು ಬಳಸಲಾದ ಮ್ಯೂಲ್ ಖಾತೆಗಳ ರಹಸ್ಯ ಜಾಲವನ್ನು ಸುಗಮಗೊಳಿಸಲು ಸೈಬರ್ ಅಪರಾಧ ಸಿಂಡಿಕೇಟ್ಗಳು ಅಪರಿಚಿತ ಬ್ಯಾಂಕ್ ಅಧಿಕಾರಿಗಳ ಶಾಮೀಲಾತಿಯೊಂದಿಗೆ ನಿರ್ಭಯದಿಂದ ಕಾರ್ಯಾಚರಿಸುತ್ತಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದ ನಂತರ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದೆ.
ದೇಶಾದ್ಯಂತ ವಿವಿಧ ಬ್ಯಾಂಕುಗಳ 743 ಶಾಖೆಗಳಲ್ಲಿ 8.50 ಲಕ್ಷ ಮ್ಯೂಲ್ ಖಾತೆಗಳು ಪತ್ತೆಯಾಗಿರುವುದು ಈ ಪಿಡುಗಿನ ವ್ಯಾಪ್ತಿಯ ಬಗ್ಗೆ ಎಚ್ಚೆರಿಕೆ ಗಂಟೆಯನ್ನು ಬಾರಿಸಿದೆ.
ಸಿಬಿಐ ಕಳೆದ ವಾರ ನಡೆಸಿದ ದಾಳಿ ಕಾರ್ಯಾಚರಣೆಗಳಲ್ಲಿ 10 ಜನರನ್ನು ಬಂಧಿಸಿದ್ದು, ಎಫ್ಐಆರ್ನಲ್ಲಿ 37 ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.







