ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನದ 144 ಕೋಟಿ ರೂ. ಪಡೆದ 830 ನಕಲಿ ಶೈಕ್ಷಣಿಕ ಸಂಸ್ಥೆಗಳು: ಸಿಬಿಐ ಆರೋಪ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನ ಹಗರಣದ ಸಂಬಂಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಈ ಹಗರಣದಿಂದ 830 ನಕಲಿ ಶೈಕ್ಷಣಿಕ ಸಂಸ್ಥೆಗಳು ಲಾಭ ಮಾಡಿಕೊಂಡಿದ್ದು, ಇದರಿಂದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ 2017-2022ರವರೆಗೆ ಸುಮಾರು ರೂ. 144 ಕೋಟಿ ನಷ್ಟ ಸಂಭವಿಸಿದೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ ಕ್ರಿಮಿನಲ್ ಪಿತೂರಿ, ವಂಚನೆ, ಫೋರ್ಜರಿ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಅವಕಾಶಗಳಡಿ ಬ್ಯಾಂಕ್ ಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಇನ್ನಿತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಸಲ್ಲಿಸಿದ್ದ ದೂರಿನಲ್ಲಿ, “ವಿದ್ಯಾರ್ಥಿ ವೇತನ ಯೋಜನೆಗಳಡಿ ನಿಧಿಗಳ ದುರುಪಯೋಗವಾಗಿದೆ ಎಂಬ ಹಲವಾರು ವರದಿಗಳನ್ನು ಪರಿಗಣಿಸಿ, ವಿದ್ಯಾರ್ಥಿ ವೇತನ ಯೋಜನೆಗಳ ಕುರಿತು ಮೂರನೆ ವ್ಯಕ್ತಿಯಿಂದ ಮೌಲ್ಯಮಾಪನ ಕೈಗೊಳ್ಳಲು ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕಾನಾಮಿಕ್ ರಿಸರ್ಚ್ ಸಂಸ್ಥೆಯನ್ನು ತೊಡಗಿಸಲಾಗಿತ್ತು. ಇದರೊಂದಿಗೆ, ನ್ಯಾಷನಲ್ ಸ್ಕಾಲರ್ ಶಿಪ್ ಪೋರ್ಟಲ್ ಮೂಲಕವೂ ಮೌಲ್ಯಮಾಪನ ನಡೆಸಿದ್ದ ಸಚಿವಾಲಯವು, ಶಂಕಿತ ಶೈಕ್ಷಣಿಕ ಸಂಸ್ಥೆಗಳು/ಅರ್ಜಿದಾರರ ವಿರುದ್ಧ ಎಚ್ಚರಿಕೆಯನ್ನು ನೀಡಿತ್ತು” ಎಂದು ಹೇಳಲಾಗಿದ್ದು, ಇದೀಗ ಈ ದೂರು ಎಫ್ ಐ ಆರ್ನ ಭಾಗವೂ ಆಗಿದೆ.
ಒಟ್ಟು 1,572 ಶೈಕ್ಷಣಿಕ ಸಂಸ್ಥೆಗಳನ್ನು ಮೌಲ್ಯಮಾಪನಕ್ಕಾಗಿ ಗುರುತಿಸಲಾಗಿತ್ತು. 21 ರಾಜ್ಯಗಳಲ್ಲಿನ ಈ 1,572 ಶೈಕ್ಷಣಿಕ ಸಂಸ್ಥೆಗಳ ಪೈಕಿ 830 ಶೈಕ್ಷಣಿಕ ಸಂಸ್ಥೆಗಳು ಒಂದೋ ನಿಷ್ಕ್ರಿಯವಾಗಿವೆ ಇಲ್ಲವೆ ನಕಲಿ ಅಥವಾ ಭಾಗಶಃ ನಕಲಿ ಆಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
2017-18ರಿಂದ 2021-22ರ ಅವಧಿಯವರೆಗೆ ಸರ್ಕಾರದ ಬೊಕ್ಕಸದ ಮೇಲಾಗಿರುವ ಆರ್ಥಿಕ ಪರಿಣಾಮಗಳನ್ನು ಲೆಕ್ಕ ಹಾಕಿರುವ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು, ಈ 830 ಶೈಕ್ಷಣಿಕ ಸಂಸ್ಥೆಗಳಿಂದ ಸರ್ಕಾರದ ಬೊಕ್ಕಸಕ್ಕೆ ರೂ. 144.33 ಕೋಟಿ ನಷ್ಟವುಂಟಾಗಿದೆ ಎಂದು ಅಂದಾಜಿಸಿದೆ ಎಂದೂ ದೂರಿನಲ್ಲಿ ಹೇಳಲಾಗಿದೆ.
ನ್ಯಾಷನಲ್ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಡಿಜಿಟಲ್ ದತ್ತಾಂಶ ಲಭ್ಯವಿರುವ ಅವಧಿಯವರೆಗಿನ ನಷ್ಟವನ್ನು ಪತ್ತೆ ಹಚ್ಚಲಾಗಿದ್ದು, ಈ ಹಗರಣವು 2017-18ನೇ ಸಾಲಿಗಿಂತ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಾಧ್ಯತೆ ಇದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಹೇಳಿದೆ.







