ಸಿಬಿಐ ಮಾಹಿತಿ ಹಕ್ಕು ಕಾಯ್ದೆಯಿಂದ ಸಂಪೂರ್ಣವಾಗಿ ವಿನಾಯಿತಿ ಹೊಂದಿಲ್ಲ: ದಿಲ್ಲಿ ಹೈಕೋರ್ಟ್
ದಿಲ್ಲಿ ಹೈಕೋರ್ಟ್
ಹೊಸ ದಿಲ್ಲಿ: ಭ್ರಷ್ಟಾಚಾರ ಮತ್ತು ಮಾನವ ಹಕ್ಕು ಉಲ್ಲಂಘನೆ ದೂರಿನ ಕುರಿತು ಕೇಂದ್ರ ತನಿಖಾ ದಳವು ಮಾಹಿತಿ ಹಕ್ಕು ಕಾಯ್ದೆ ಹಾಗೂ ಪಾರದರ್ಶಕತೆ ಕಾನೂನಿನಡಿ ಸಂಪೂರ್ಣವಾಗಿ ವಿನಾಯಿತಿ ಹೊಂದಿಲ್ಲ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 24 (ನಿರ್ದಿಷ್ಟ ಸಂಸ್ಥೆಗಳಿಗೆ ಈ ಕಾಯ್ದೆ ಅನ್ವಯವಾಗುವುದಿಲ್ಲ) ಕುರಿತು, ಕೇಂದ್ರ ತನಿಖಾ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆಯ ಎರಡನೆ ಪರಿಚ್ಛೇದದಲ್ಲಿದ್ದರೂ, ಸಂಪೂರ್ಣ ಕಾಯ್ದೆಯು ಅದರಂಥ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ ಎಂದು ಅರ್ಥವಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿತು.
“ಸೆಕ್ಷನ್ 24ಕ್ಕೆ ಕಲ್ಪಿಸಿರುವ ಅವಕಾಶಗಳ ಪ್ರಕಾರ, ಭ್ರಷ್ಟಾಚಾರ ಮತ್ತು ಮಾನವ ಹಕ್ಕು ಉಲ್ಲಂಘನೆಯಂಥ ಆರೋಪಗಳಿಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ಮಾಹಿತಿ ಒದಗಿಸಬೇಕಾಗುತ್ತದೆ. ಈ ಮಾಹಿತಿಗೆ ಮಾಹಿತಿ ಹಕ್ಕು ಕಾಯ್ದೆಯ ಎರಡನೆ ಪರಿಚ್ಛೇದಕ್ಕೆ ಅನ್ವಯಿಸಿ ವಿನಾಯಿತಿ ಪಡೆಯುವಂತಿಲ್ಲ” ಎಂದು ನ್ಯಾ. ಸುಬ್ರಮನೊನಿಯಮ್ ಪ್ರಸಾದ್ ಜನವರಿ 30ರಂದು ನೀಡಿರುವ ತೀರ್ಪಿನಲ್ಲಿ ಹೇಳಿದ್ದಾರೆ. ಈ ತೀರ್ಪು ನಿನ್ನೆ ಸಂಜೆಯಷ್ಟೆ ಲಭ್ಯವಾಗಿದೆ.
ಕೇಂದ್ರ ಮಾಹಿತಿ ಆಯೋಗವು ನವೆಂಬರ್ 19ರಂದು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸಂಜೀವ್ ಚತುರ್ವೇದಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಮಾಹಿತಿಗಳನ್ನು ಅರ್ಜಿದಾರರಿಗೆ ಒದಗಿಸುವಂತೆ ಕೇಂದ್ರ ತನಿಖಾ ಸಂಸ್ಥೆಗೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೊರೆ ಹೋಗಿತ್ತು.