7 ರಾಜ್ಯಗಳಲ್ಲಿ ಸಿಬಿಐ ದಾಳಿ; ಅಕ್ರಮ ಬ್ಯಾಂಕ್ ಖಾತೆ ನಿರ್ವಹಿಸುತ್ತಿದ್ದ ಮೂವರ ಬಂಧನ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ, ಜು. 16: ಆಪರೇಷನ್ ಚಕ್ರ-5 ಅಡಿಯ ಪ್ರಮುಖ ಬೆಳವಣಿಗೆಯೊಂದರಲ್ಲಿ ಸಿಬಿಐ ಸೈಬರ್ ಕ್ರೈಮ್ ಜಾಲ ಹಾಗೂ ಡಿಜಿಟಲ್ ಅರೆಸ್ಟ್ ಹಗರಣಗಳ ಮೇಲಿನ ತನ್ನ ಕಠಿಣ ಕ್ರಮವನ್ನು ತೀವ್ರಗೊಳಿಸಿದೆ.
ಸಿಬಿಐ ಬುಧವಾರ 7 ರಾಜ್ಯಗಳಾದ ದಿಲ್ಲಿ, ಬಿಹಾರ, ಮಧ್ಯಪ್ರದೇಶ, ಕೇರಳ, ಪಂಜಾಬ್, ಆಂಧ್ರಪ್ರದೇಶ ಹಾಗೂ ರಾಜಸ್ಥಾನದ ಹಲವು ಸ್ಥಳಗಳಲ್ಲಿ ಸಂಘಟಿತ ಶೋಧ ಕಾರ್ಯಾಚರಣೆ ನಡೆಸಿದೆ.
ಈ ಶೋಧ ಕಾರ್ಯಾಚರಣೆಯಲ್ಲಿ ಸಿಬಿಐ ಅಕ್ರಮ ಆದಾಯವನ್ನು ವರ್ಗಾಯಿಸಲು ಹಾಗೂ ಮರೆಮಾಚಲು ಸೈಬರ್ ವಂಚಕರು ಬಳಸುವ ನಿರ್ಣಾಯಕ ಮಾರ್ಗವಾಗಿರುವ ಅಕ್ರಮ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವಲ್ಲಿ ಹಾಗೂ ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮೂವರನ್ನು ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.
ಮೊಬೈಲ್ ಫೋನ್, ಕೆವೈಸಿ ದಾಖಲೆ, ಬ್ಯಾಂಕ್ ಖಾತೆ ದಾಖಲೆ ಹಾಗೂ ಇತರ ವರ್ಗಾವಣೆ ದಾಖಲೆಗಳು ಸೇರಿದಂತೆ ದೊಡ್ಡ ಪ್ರಮಾಣದ ದೋಷಾರೋಪಣೆಯ ವಸ್ತುಗಳನ್ನು ಸಿಬಿಐ ವಶಪಡಿಸಿಕೊಂಡಿದೆ.
ವಂಚನೆಯಿಂದ ಗಳಿಸಿದ ಹಣವನ್ನು ವರ್ಗಾಯಿಸಲು ಹಾಗೂ ಹಿಂಪಡೆಯಲು ಸಾಧ್ಯವಾಗುವಂತೆ ಸೈಬರ್ ಕ್ರಿಮಿನಲ್ ಗಳೊಂದಿಗೆ ಶಾಮೀಲಾಗಿ ಈ ವ್ಯಕ್ತಿಗಳು ಮಧ್ಯವರ್ತಿಗಳು ಹಾಗೂ ಖಾತೆದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನಿರ್ದಿಷ್ಟ ಬೇಹುಗಾರಿಕೆ ಮಾಹಿತಿ ಹಿನ್ನೆಲೆಯಲ್ಲಿ ಸಿಬಿಐ ಈ ಹಿಂದೆ ಐಪಿಸಿ-ಬಿಎನ್ಎಸ್ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ 37 ಮಂದಿಯ ವಿರುದ್ಧ ಜೂನ್ 25ರಂದು ಪ್ರಕರಣ ದಾಖಲಿಸಿತ್ತು. ಅನಂತರ ಜೂನ್ 26 ಹಾಗೂ 27ರಂದು 40 ಸ್ಥಳಗಳಲ್ಲಿ ಆರಂಭಿಕ ದಾಳಿ ನಡೆಸಿತ್ತು. ಈ ಸಂದರ್ಭ ಇದೇ ಅಪರಾಧಕ್ಕಾಗಿ 10 ಮಂದಿಯನ್ನು ಬಂಧಿಸಿತ್ತು.
ಮೂರು ಅಂಶಗಳನ್ನು ಕೇಂದ್ರೀಕರಿಸಿದ ಕಾರ್ಯತಂತ್ರದೊಂದಿಗೆ ಸೈಬರ್ ಕ್ರೈಮ್ ಜಾಲವನ್ನು ವ್ಯವಸ್ಥಿತವಾಗಿ ನಿರ್ಮೂಲನೆ ಮಾಡುವ ಉದ್ದೇಶವನ್ನು ಈ ಕಾರ್ಯಾಚರಣೆ ಹೊಂದಿದೆ ಎಂದು ಮೂಲಗಳು ತಿಳಿಸಿವೆ.







