CBSE 10ನೇ ತರಗತಿ ಫಲಿತಾಂಶ ಪ್ರಕಟ| ಶೇ. 93ರಷ್ಟು ವಿದ್ಯಾರ್ಥಿಗಳು ತೇರ್ಗಡೆ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಮಂಗಳವಾರ ಪ್ರಕಟವಾದ ಸಿಬಿಎಸ್ಇ 10ನೇ ತರಗತಿ ಫಲಿತಾಂಶದಲ್ಲಿ ಶೇ. 93ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಬಾಲಕಿಯರು ಬಾಲಕರಿಗಿಂತ ಶೇಕಡಾ 2ರಷ್ಟು ಹೆಚ್ಚಿನ ಅಂಕಗಳೊಂದಿಗೆ ಮೇಲುಗೈ ಸಾಧಿಸಿದ್ದಾರೆ ಎಂದು ಪರೀಕ್ಷಾ ನಿಯಂತ್ರಣಾಧಿಕಾರಿ ಸನ್ಯಾಮ್ ಭಾರದ್ವಾಜ್ ತಿಳಿಸಿದ್ದಾರೆ.
ಈ ಬಾರಿಯ ಪರೀಕ್ಷೆಯಲ್ಲಿ ಒಟ್ಟು ಶೇ. 93.66ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಕಳೆದ ಬಾರಿಯ ಫಲಿತಾಂಶವಾದ ಶೇ. 93.60ಗೆ ಹೋಲಿಸಿದರೆ, ಈ ಬಾರಿ ಅಲ್ಪಪ್ರಮಾಣದ ಏರಿಕೆಯಾಗಿದೆ.
ಈ ಬಾರಿಯ ಪರೀಕ್ಷೆಯಲ್ಲಿ ಶೇ. 95ರಷ್ಟು ಬಾಲಕಿಯರು ತೇರ್ಗಡೆಯಾಗಿದ್ದರೆ, ಶೇ. 92.63ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ.
ಶೇ. 90ಕ್ಕಿಂತ ಹೆಚ್ಚು ಅಂಕಗಳನ್ನು ಸುಮಾರು 1.99 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಳಿಸಿದ್ದರೆ, 45,516 ವಿದ್ಯಾರ್ಥಿಗಳು ಶೇ. 95ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.
1.41 ಲಕ್ಷಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ವಿಭಾಗೀಯ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.
ಈ ಬಾರಿಯ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಗೆ ಒಟ್ಟು 23,71,939 ವಿದ್ಯಾರ್ಥಿಗಳು ಹಾಜರಾಗಿದ್ದರು.





