ಚುನಾವಣಾ ಆಯೋಗವು ನಮ್ಮ ತಾಯಂದಿರ, ಪುತ್ರಿಯರ, ಸೊಸೆಯಂದಿರ ಫೋಟೋ ಹಂಚಿಕೊಳ್ಳಬೇಕೇ?: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಪ್ರಶ್ನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ |PC : Hindusthan Times
ಹೊಸದಿಲ್ಲಿ,ಆ.17: ಕಳೆದ ಕೆಲವು ದಿನಗಳಿಂದ ಹಲವಾರು ಮತದಾರರ ಛಾಯಾಚಿತ್ರಗಳನ್ನು ಅವರ ಅನುಮತಿಯಿಲ್ಲದೆ ಬಳಸಿಕೊಂಡಿರುವುದನ್ನು ಹಾಗೂ ಪ್ರಸಾರ ಮಾಡಿರುವುದು ಕಂಡು ಬಂದಿದೆ. ಚುನಾವಣಾ ಆಯೋಗವು ನಮ್ಮ ತಾಯಂದಿರ, ಪುತ್ರಿಯರ ಅಥವಾ ಸೊಸೆಯಂದಿರ ಭಾವಚಿತ್ರಗಳನ್ನು ಹಂಚಿಕೊಳ್ಳಬೇಕೇ ಎಂದು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಹೊಸದಿಲ್ಲಿಯಲ್ಲಿ ರವಿವಾರ ಸುದ್ದಿಗೋಷ್ಠಿನ್ನುದ್ದೇಶಿಸಿ ಅವರು ಮಾತನಾಡಿದರು.
ಇತ್ತೀಚಿನ ಚುನಾವಣೆಗಳಲ್ಲಿ ಮತಗಟ್ಟೆಗಳ ಕುರಿತಾದ ಸಿಸಿಟಿವಿ ವೀಡಿಯೋ ಫೂಟೇಜ್ ಗಳನ್ನು ಚುನಾವಣಾ ಆಯೋಗವು ಹಂಚಿಕೊಳ್ಳದೆ ಇರುವ ಕುರಿತು ವ್ಯಕ್ತವಾದ ಆತಂಕಗಳನ್ನು ಉಲ್ಲೇಖಿಸಿದ ಅವರು ಮತದಾರರ ಖಾಸಗಿತನವನ್ನು ಕಾಪಾಡುವುದಕ್ಕಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದರು.
‘‘ಯಾಂತ್ರೀಕೃತ ವಿಧಾನಗಳಿಂದ ಓದಲು (ಮೆಶಿನ್ ರಿಡೇಬಲ್) ಸಾಧ್ಯವಿರುವಂತಹ ‘‘ ಮತದಾರಪಟ್ಟಿಯನ್ನು ಪ್ರಕಟಿಸದೆ ಇರುವ ಬಗ್ಗೆ ಪ್ರತಿಪಕ್ಷಗಳು ಕಳವಳಕ್ಕೆ ಉತ್ತರಿಸಿರುವ ಅವರು 2019ರಲ್ಲಿ ಮತದಾರರ ಖಾಸಗಿತನದ ಉಲ್ಲಂಘನೆಯಾಗಿತ್ತು ಎಂದು ಉಲ್ಲೇಖಿಸಿದರು.
ಬಿಹಾರದ ಕರಡು ಮತದಾರ ಪಟ್ಟಿಯಲ್ಲಿ ತಿದ್ದುಪಡಿಗಳನ್ನು ಮಾಡಲು ಇನ್ನೂ 15 ದಿನಗಳ ಬಾಕಿ ಉಳಿದಿದ್ದು, ಈ ಬಗ್ಗೆ ಅಹವಾಲು ಸಲ್ಲಿಸಲು ಯಾವುದೇ ರಾಜಕೀಯ ಪಕ್ಷವು ಭಾರತೀಯ ಚುನಾವಣಾ ಆಯೋಗವನ್ನು ಸಂಪರ್ಕಿಸಬಹುದಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್
ಹೇಳಿದ್ದಾರೆ.
ಚುನಾವಣಾ ಆಯೋಗದ ಬಾಗಿಲು ಎಲ್ಲರಿಗೂ ತೆರೆದಿದ್ದು, ಬಿಹಾರದ ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯಡಿ ಸಿದ್ಧಪಡಿಸಲಾದ ಕರಡು ಮತದಾರಪಟ್ಟಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಪ್ರಸ್ತಾವಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
‘‘ ಹದಿನೈದು ದಿನಗಳು ಇನ್ನೂ ಉಳಿದಿವೆ. ರಾಜಕೀಯ ಪಕ್ಷಗಳಿಗೆ ನೀಡಲಾದ ಕರಡುಮತದಾರಪಟ್ಟಿಯ ಕುರಿತಾದ ಯಾವುದೇ ಸಮಸ್ಯೆಗಳನ್ನು ಸೂಚಿತವಾದ ಫಾರಂಗಳಲ್ಲಿ ನಮೂದಿಸಿ, ಆಯೋಗದ ಗಮನಕ್ಕೆ ತರಬಹುದೆಂದು ಚುನಾವಣಾ ಆಯೋಗವು ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಕರೆ ನೀಡುತ್ತದೆಯೆಂದು ’’ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ತಿಳಿಸಿದ್ದಾರೆ.
‘‘ಮುಂದಿನ ಎಸ್ಐಆರ್ ಅನ್ನು ಪಶ್ಚಿಮಬಂಗಾಳ ಮತ್ತಿತರ ರಾಜ್ಯಗಳಲ್ಲಿ ಯಾವಾಗ ನಡೆಸಬೇಕೆಂಬ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ", ಎಂದು ಗ್ಯಾನೇಶ್ ಕುಮಾರ್ ತಿಳಿಸಿದ್ದಾರೆ.







